Sunday, May 8, 2011

ಏನಾದರೂ ಬರೆಯಬೇಕು ಅಂದುಕೊಳ್ಳುತ್ತಲೇ ತುಂಬಾ ದಿನಗಳನ್ನು ಹಾಗೆಯೇ ಕಳೆದಾಯಿತು. ಮೊನ್ನೆ vijayanext ಪತ್ರಿಕೆಯಲ್ಲಿ ನನ್ನ ಈ ಬರಹ ಪ್ರಕಟಗೊಂಡಾಗ ಅಂದುಕೊಂಡೆ, ಈ ಬರಹದಿಂದಲೇ ನನ್ನ 'ಅಭಿನಯ' ಬ್ಲಾಗಿನ ಪಯಣ ಶುರು ಮಾಡುವುದು ಅಂತ. ಇಗೋ ಇಲ್ಲಿದೆ ನನ್ನ ಆ ಲೇಖನ. ಓದಿ ಮುಲಾಜಿಲ್ಲದ ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿದ್ದೇನೆ. ಈ ಮಾತು ನನ್ನ ಎಲ್ಲ ಬರಹಗಳಿಗೂ ಅನ್ವಯಿಸುತ್ತದೆ. :)
  ಈ ಬರಹ vijayanext ಪತ್ರಿಕೆಯಲ್ಲಿ ದಿನಾಂಕ : 06-05-2011 ಶುಕ್ರವಾರದಂದು ಪ್ರಕಟಗೊಂಡಿದೆ.  

http://www.vijayanextepaper.com/svww_zoomart.php?Artname=20110506a_014101002&ileft=45&itop=104&zoomRatio=130&AN=20110506a_014101002


ನಾನು ಅಭಿನಯಿಸಲು ಪ್ರಾರಂಭಿಸಿದ್ದು ಕನ್ನಡ ನಾಟಕಗಳಲ್ಲಿ. ನಂತರ ಟಿವಿ ಎಂಬ ಪುಟ್ಟ ಮಾಯಾಲೋಕ. ರಂಗಭೂಮಿಯಲ್ಲಿ ಪಾತ್ರಧಾರಿ ಯಾವುದೇ ಪಾತ್ರಕ್ಕೆ ಬ್ರ್ಯಾಂಡ್ ಆಗುವ ಅಪಾಯವಿಲ್ಲದ್ದರಿಂದ ಅಲ್ಲಿರುವ ಕಲಾವಿದರು ಆ ಮಟ್ಟಿಗೆ ನಿರಾಳ! ರಂಗಭೂಮಿಯಲ್ಲಿ ಕೆಲವು ಪಾತ್ರಕ್ಕೆ ಇಂಥ ವ್ಯಕ್ತಿಯನ್ನು ಬಿಟ್ಟರೆ ಬೇರೆಯವರನ್ನು ಕಲ್ಪಿಸಿಕೊಳ್ಳಲಾಗದು ಎನ್ನುವ ಮಾತನ್ನು ನೀವು ಕೇಳಿದ್ದರೆ ಅದು ಆಯಾ ಕಲಾವಿದರ ಸಾಮರ್ಥ್ಯವನ್ನು ಸೂಚಿಸುವಂಥದ್ದಾಗಿರುತ್ತದೆಯೇ ಹೊರತು ಆ ಕಲಾವಿದರನ್ನು ಅಂಥ ಪಾತ್ರಗಳಿಗೆ ಮಾತ್ರ ಸೀಮಿತಗೊಳಿಸುವಂಥದ್ದಾಗಿರುವುದಿಲ್ಲ. ಬೇರೆ ನಾಟಕಗಳಲ್ಲಿ ಅದೇ ವ್ಯಕ್ತಿಯನ್ನು ಆಯಾ ಪಾತ್ರವಾಗಿ ಪ್ರೇಕ್ಷಕರು ಗುರುತಿಸುತ್ತರೆಯೆ ವಿನಃ ಮತ್ತೊಂದನ್ನು ಯೋಚಿಸುವುದಿಲ್ಲ. ಹೀಗಾಗಿ ರಂಗಭೂಮಿಯ ಕಲಾವಿದರು ಈ ವಿಷಯದಲ್ಲಿ ನಿರಾಳ ಎಂದೇ ಹೇಳಬೇಕು.
    ಅಂಥ ಒಂದು ನಿರಾಳತೆಯನ್ನು ಮೈಗೂಡಿಸಿಕೊಂಡ ನಾನು ಟಿವಿ ಧಾರಾವಾಹಿಯಲ್ಲಿ ಮೊದಲಿಗೇನೇ ತಾಯಿಯ ಪಾತ್ರಕ್ಕೆ ಕರೆ ಬಂದಾಗ ಯಾವ ಅಳುಕೂ ಇಲ್ಲದೇನೇ ಖುಷಿ ಖುಷಿಯಿಂದ ಒಪ್ಪಿಕೊಂಡೆ, ಇದೇ ಪಾತ್ರವೇನು ಕೊನೆಯದಲ್ಲವಲ್ಲ ಎಂದು. ತಪ್ಪು ಮಾಡಿದೆನಾ…?
  ಆಗ ಹೀಗೆಂದು ಅನ್ನಿಸಲೇ ಇಲ್ಲ. ನಂತರ ಸಾಲಾಗಿ ಅಮ್ಮ ಇಲ್ಲವೆ ಅತ್ತೆಯ ಪಾತ್ರಗಳಷ್ಟೇ ಅರಸಿಕೊಂಡು ಬಂದವು ನೋಡಿ, ಕಂಗಾಲಾಗಿ ಹೋದೆ!! ನನಗೇ ಗೊತ್ತಿಲ್ಲದಂತೆ ಪ್ರಮೋಶನ್ ಇಲ್ಲದಂಥ ಪಾತ್ರಗಳಿಗೆ ನನ್ನನ್ನು ಒಪ್ಪಿಸಿಕೊಂಡಾಗಿತ್ತು. ಇಲ್ಲಿ ಪ್ರಮೋಶನ್ ಅಂದರೆ ಪಾತ್ರ ವೈವಿಧ್ಯತೆ. ಮಗಳು, ನಾಯಕಿ, ಖಳನಾಯಕಿ, ಅಕ್ಕ, ಅತ್ತಿಗೆ, ಇತ್ಯಾದಿ ಇತ್ಯಾದಿ  ವೈವಿಧ್ಯಮಯ ಪಾತ್ರಗಳನ್ನು ಮಾಡುವ, ಆ ಮೂಲಕ ಆಯಾ ಭಾವನೆಗಳನ್ನು ಅಭಿನಯಿಸುವ ಅವಕಾಶದಿಂದ ವಂಚಿತಳಾದ ಭಾವ ತುಂಬಾ ದಿನಗಳವರೆಗೆ ಆವರಿಸಿಕೊಂಡಿತ್ತು. ಒಂದಿಷ್ಟು ದಿನ ಈ ಧಾರಾವಾಹಿಗಳ ಸಹವಾಸವೇ ಬೇಡ ಎಂದು ದೂರವಿರುವ ಪ್ರಯತ್ನವನ್ನೂ ಮಾಡಿದೆ. ಆಗ ‘ಕಸ್ತೂರಿ ನಿವಾಸ’ ಎಂಬ ಧಾರವಾಹಿಯಲ್ಲಿ ನನ್ನತ್ತೆಯ ಪಾತ್ರ ಮಾಡುತ್ತಿದ್ದ ಹಿರಿಯ ನಟಿ ಬಿ.ವಿ.ರಾಧಾ ಅವರು ಸೆಟ್ಟಲ್ಲಿ ನನ್ನನ್ನು ಕೂರಿಸಿಕೊಂಡು “ನೋಡಿ, ಈಗೇನೊ ನೀವು ನಿಮ್ಮ ವಯಸ್ಸಿಗೆ, ಸಾಮರ್ಥ್ಯಕ್ಕೆ ತಕ್ಕಂತ ಪಾತ್ರ ಬೇಕು ಅಂತ ಬಂದ ಅವಕಾಶಾನ ಕೈ ಬಿಟ್ಟ್ರಿ ಅಂದ್ಕೊಳ್ಳಿ. ಅಂಥ ಅವಕಾಶಕ್ಕಾಗಿ ಕಾಯ್ತಾ ಕಾಯ್ತಾ ನಿಮಗೆ ನಿಜಕ್ಕೂ ಅಮ್ಮ, ಅತ್ತೆಯ ಪಾತ್ರಗಳನ್ನೇ ಮಾಡುವಷ್ಟು ವಯಸ್ಸಾಗಿಬಿಡುತ್ತೆ. ಆಗ ಬಂದ ಅವಕಾಶಗಳನ್ನ ತಿರಸ್ಕರಿಸದೆ ಮಾಡಿದ್ದರೇನೆ ಒಳ್ಳೆಯದಿತ್ತು ಅನ್ನಿಸೋಕೆ ಶುರುವಾಗುತ್ತೆ. ಅದರ ಬದಲು ಬಂದ ಪಾತ್ರಗಳನ್ನು ಒಪ್ಕೊಂಡು ಸುಮ್ಮನೆ ಅಭಿನಯಿಸ್ತಾ ಇರಿ” ಎಂದು ತಿಳಿ ಹೇಳಿದರು.
   ಆಗ “ಹೌದಲ್ವಾ!” ಎಂದು ಅವರ ಮಾತನ್ನು ಒಪ್ಪಿಕೊಂಡ ಮನಸು ಮತ್ತೆ ಇನ್ನ್ಯಾವುದೋ ಧಾರಾವಾಹಿಯಲ್ಲಿ ತಾಯಿಯ ಪಾತ್ರಕ್ಕೆ ಕರೆ ಬಂದಾಗ ರಚ್ಚೆ ಹಿಡಿಯಿತು, ಸಾಧ್ಯವಿಲ್ಲ ಎಂದು. ಗಾಯದ ಮೇಲೆ ಬರೆ ಎಂಬಂತೆ ತಾಯಿಯ ಪಾತ್ರ ಸಾಲದು ಅಂತ ಬರೀ ಒಳ್ಳೆಯ ತಾಯಿ ಅಥವಾ ಒಳ್ಳೆಯ ಅತ್ತೆಯ ಪಾತ್ರಗಳಿಗಾಗಿಯೇ ಆಹ್ವಾನ!! ಏನಿರುತ್ತೆ ಅಂಥ ಪಾತ್ರಗಳಲ್ಲಿ ಛಾಲೆಂಜು?! ತಾನೂ ಅಳ್ತಾ, ಅಳುತ್ತಲೇ ಮನೇಲಿದ್ದ ಎಲ್ಲರನ್ನೂ ಸಮಾಧಾನಿಸುತ್ತಾ ಸಹನಶೀಲೆ, ದಯಾಮಯಿ,ತ್ಯಾಗಿ, ಮೃದುಭಾಷಿಣಿ ರೂಪದ ಪಾತ್ರಗಳು ನನ್ನ ಸಹನೆಯನ್ನು ಪರೀಕ್ಷಿಸುತಿದ್ದವು. ಬಂದಂಥ ಅಂಥ ಹಲವಾರು ಪಾತ್ರಗಳನ್ನು ನಯವಾಗಿ ನಿರಾಕರಿಸಿದೆ. ಹಾಗಂತ ಖಳ ಪಾತ್ರಗಳು ಮಾತ್ರ ಛಾಲೆಂಜಿಂಗ್ ಅಂತೇನೂ ನನ್ನ ಅನಿಸಿಕೆ ಅಲ್ಲ.  ಅಮ್ಮ ಅಥವಾ ಅತ್ತೆಯ ಪಾತ್ರವಾದರೂ ಪಾತ್ರಗಳಲ್ಲಿ ವೈವಿಧ್ಯತೆ ಇರಬೇಕು, ಅಭಿನಯಕ್ಕೆ ಅವಕಾಶವಿರಬೇಕು ಎಂದು ಬಯಸುತ್ತಿದ್ದೆ. For a change ಕೆಟ್ಟ ಅಮ್ಮ, ಇಲ್ಲವೆ ಅತ್ತೆಯ ಪಾತ್ರವಾದರೂ ಕೊಡಿ ಎಂದು ಕೇಳಿದರೆ ಎದುರಿನವರು ವಿನಯದಿಂದ “ ಇಲ್ಲ ಮೇಡಂ, ನಿಮ್ಮ ಮುಖದಲ್ಲಿ ಅಂಥ ಒರಟುತನವಿಲ್ಲ. ಸೌಮ್ಯ ಮುಖ ನಿಮ್ಮದು. ನಿಮಗೆ ಇಂಥ ಪಾತ್ರಗಳೇ ಒಪ್ಪೋದು, ಪ್ಲೀಸ್ ಒಪ್ಕೊಳ್ಳಿ” ಎಂದು ನನ್ನ ಸಾಧು ಮುಖವನ್ನು ನನ್ನಿದಿರು ಹಿಡಿದು ಸುಮ್ಮನಾಗಿಸಿಬಿಡುತ್ತಿದ್ದರು. ಇದೆಲ್ಲದರ ಜೊತೆಗೆ ನನ್ನ ಮಕ್ಕಳು ಅಥವಾ ಅಳಿಯಂದಿರ ಮಾತ್ರ ಮಾಡುವ ಕಲಾವಿದರು ನನ್ನ ತಮ್ಮನ ವಯಸ್ಸಿನವರೋ ಇಲ್ಲವೇ ನನ್ನ ವಯಸ್ಸಿನವರೋ ಇರುತ್ತಿದ್ದುದು ಕಲಾವಿದೆಯನ್ನು ಮೀರಿದ ನನ್ನೊಳಗಿನ ಜಯಲಕ್ಷ್ಮೀಯನ್ನು ಕೆಣಕುತ್ತಿತ್ತು! ಹಾಗೆಂದೇ ಪ್ರಕಟವಾಗಿಯೇ ಗೊಣಗುತ್ತಿದ್ದೆ ಕೂಡಾ... “ನನ್ನ ಮಕ್ಕಳಿನ್ನೂ ಹೈಸ್ಕೂಲೂ ಕಂಡಿಲ್ಲ, ಧಾರಾವಾಹಿಗಳಲ್ಲಿ ಮಾತ್ರ ಆಗಲೇ ನನ್ನ ಮಕ್ಕಳಿಗೆ ಮದುವೆ, ಬಸಿರು,ಬಾಣಂತನ… ಛೆ!”
  ಗೊಣಗುತ್ತಲೇ 12-14 ಧಾರಾವಾಹಿಗಳಲ್ಲಿ ನಟಿಸಿದೆ, ಪಾತ್ರಗಳಿಗೆ ಆದಷ್ಟು ಜೀವ ತುಂಬುವ ಪ್ರಯತ್ನ ಮಾಡಿದೆ. ಆದರೆ…. ಕ್ಷಮಿಸಿ ಮನಃಪೂರ್ವಕ ಅಭಿನಯಿಸಿದೆ ಎನ್ನುವ ಧೈರ್ಯವಿಲ್ಲ ನನಗೆ! ಆ ಮಟ್ಟಿಗೆ ನನ್ನಿಂದ ಆಯಾ ಪಾತ್ರಗಳಿಗೆ ಅಷ್ಟಷ್ಟು ಅನ್ಯಾಯವಾಯಿತೆಂದೇ ಹೇಳಬೇಕು. ಆದರೆ ಧಾರಾವಾಹಿಗಳನ್ನು ನೋಡುತ್ತಿದ್ದ ವೀಕ್ಷಕರು ಎದುರಾದಾಗ, “ನೀವೆಷ್ಟು ಒಳ್ಳೇವ್ರುರೀ!” ಎನ್ನುತಿದ್ದರು!! ನೀವು ಅಂದ್ರೆ ನಾನಲ್ಲ, ಆ ಪಾತ್ರ.
ನನ್ನೆಲ್ಲ ದೂರುಗಳನ್ನು ತೊಡೆದು ಹಾಕಲೇಂದೇ ಮಂಗಳತ್ತೆಯ ಪಾತ್ರ ನನ್ನನ್ನರಸಿ ಬಂದಾಗಲೂ ಅಂಥ ಸಂಭ್ರಮವಾಗಲಿಲ್ಲ ನನಗೆ. ಆದರೆ ನಾನು ಅಭಿನಯಿಸಿದ ಮೊದಲನೆಯ ದೃಶ್ಯದಲ್ಲೇ ನಿರ್ದೇಶಕರ ಆಣತಿ ಕೇಳಿ ಎಂಥದೊ ಆಶಾಕಿರಣ ಮನದ ಮೂಲೆಯನ್ನು ಬೆಳಗಿಸಿತು! ಅದೇನೆಂದರೆ, “ ಧ್ವನಿ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಇಂತಿಷ್ಟು ಕಂಟ್ರೋಲ್ ಬೇಕೇ ಬೇಕು!”
ಇದುವರೆಗು ಮಾಡಿದ ಪಾತ್ರಗಳಿಂತ ಈ ಪಾತ್ರ ಭಿನ್ನವಾಗಿದೆ ಎಂದೆನಿಸಿ ಖುಷಿಯಾದರೂ again ತುಂಬಾ ಛಾಲೇಂಜಿಂಗ್ ಅಂತ ಅನ್ನಿಸುತ್ತಲೇ ಇಲ್ಲ!!  ಅಥವಾ ನನಗೇ ಛಾಲೇಂಜ್ ಅನ್ನುವುದರ ಅರ್ಥ ಸರಿಯಾಗಿ ಗೊತ್ತಿಲ್ಲವೇನೊ… ಛಾಲೇಂಜ್ ಅಂದ್ರೆ ಅದು ಹೇಗಿರುತ್ತೊ ಏನೊ, ಅದಕ್ಕಾಗಿ ಎದುರು ಕಾಯ್ತಿದೀನಿ. ಅಹಂಕಾರ ಅನ್ಕೋಬೇಡಿ ದಯವಿಟ್ಟು, ಇದು ಹಪಹಪಿ.
    ಮಂಗಳತ್ತೆಯ ಪಾತ್ರ ಕನ್ನಡಿಗರೆಲ್ಲರೂ ನನ್ನನ್ನು ಗುರುತಿಸುವಂತೆ, ಮೆಚ್ಚಿ ಆಶೀರ್ವದಿಸುವಂತೆ ಮಾಡಿತು. ನಿಮ್ಮೆಲ್ಲರಿಗೆ ಕೃತಜ್ಞೆ ನಾನು. ನನ್ನೊಳಗಿನ ಕಲಾವಿದೆ ಈಗ ಸ್ವಲ್ಪ, ಸ್ವಲ್ಪ ಮಾತ್ರವೇ ಪ್ರಸನ್ನೆ. ಜೊತೆಗೆ ನನ್ನ ವಯಸ್ಸಿಗೆ ಮೀರಿದ ಪಾತ್ರಗಳನ್ನ ನಾನು ಮಾಡ್ತಿದೀನಿ ಅನ್ನುವ ಕೊರಗು ಕಡಿಮೆಯಾಗಿ ಸ್ಥಿತಪ್ರಜ್ಞಳಾಗಿದೀನಿ. ಎಂಥಾ ಸ್ಥಿತಪ್ರಜ್ಞತೆ ಎಂದರೆ ನನ್ನ ಮುಂಬರುವ ಧಾರಾವಾಹಿಯಲ್ಲಿ ನೀವು ನನ್ನನ್ನು ಅಜ್ಜಿಯಾಗಿ ನೋಡಲಿದ್ದೀರಿ! ಸತ್ಯವಾಗ್ಲೂ!
“ನಿಜಕ್ಕೂ ನಿನ್ನದು ಸ್ಥಿತಪ್ರಜ್ಞೆಯೇ ಜಯಲಕ್ಷ್ಮೀ? ಜನರೆದುರಿಗೆ ಸುಳ್ ಹೇಳಬೇಡ್ವೆ ಸುಮ್ನಿರು!”
ಮನಸಿಗೆ ನಾನು ಗದರಿಸ್ತಾ ಇರೋದು ನಿಮಗೆ ಕೇಳಿಸ್ಲಿಲ್ಲ ತಾನೆ...?
                                                      - ಜಯಲಕ್ಷ್ಮೀ ಪಾಟೀಲ್.

13 comments:

  1. ನಾನು ಮಾಡಬಲ್ಲೆ ಎನ್ನುವುದು ಆತ್ಮವಿಶ್ವಾಸ... ನನ್ನೊಬ್ಬನಿಂದಲೇ ಮಾಡಲು ಸಾಧ್ಯ ಎಂಬುದು ಅಹಂಕಾರ...ನಿಮ್ಮದು ಅಹಂಕಾರವಲ್ಲ, ಆತ್ಮವಿಶ್ವಾಸ... ಆಲ್ ದಿ ಬೆಸ್ಟ್!!

    ReplyDelete
  2. ನಿಮ್ಮಲ್ಲಿನ ಆತ್ಮವಿಶ್ವಾಸಕ್ಕೆ ವಿಭಿನ್ನ ಪಾತ್ರಗಳು ಹುಡುಕಿ ಬರುತ್ತವೆ. ಮನದಾಳದ ಲೇಖನ ಚೆನ್ನಾಗಿದೆ. ಈವರೆಗು ಕಂಡ ಪಾತ್ರಗಳಿಗೆ ಜೀವ ತುಂಬಿದ್ದೀರಿ. ಮತ್ತಷ್ಟು ವಿಶಿಷ್ಟ ಪಾತ್ರಗಳು ನಿಮ್ಮನ್ನು ಹುಡುಕಿಕೊಂಡುಬರಲೆಂದು ಬಯಸುತ್ತೇವೆ... ಶುಭವಾಗಲಿ....

    ReplyDelete
  3. ಜಯಲಕ್ಷ್ಮೀಯವರೆ...

    ನಮಗೂ ಸಹ ನಿಮ್ಮನ್ನು ಬೇರೆ ಬೇರೆ ಥರಹದ ಪಾತ್ರಗಳಲ್ಲಿ ನೋಡುವಾಸೆ ಇದೆ..

    ನಿಮ್ಮಾಸೆ ಕೈಗೂಡಲಿ ಎನ್ನುವದು ನಮ್ಮ ಆಸೆ ಹಾಗೂ ಹಾರೈಕೆ

    ReplyDelete
  4. Hello Namskara Jayalaxmiyavare,
    Nanu nimmanna ondu samarambadalli nodidaga Mangalatte(Jayalaxmi) istu chikkavara antanisiddu nija. Amele dharavahiyalli noduvaga intha patra hege madtare, body language acting super madam. Nimma lekhanagalanna Odidde tumba chennagi baritira. Please i blogali mattastu bariri Abinayakke sambadisiddu.

    ReplyDelete
  5. ಜಯಲಕ್ಷ್ಮಿ ಮೇಡಮ್,

    ನಿಮ್ಮ ಪ್ರಾರಂಭದ ದಿನಗಳಿಂದ ಇಲ್ಲಿನವರೆಗಿನ ನಿಮ್ಮ ನಟನಾ ಬದುಕಿನ ವಿವರಣೆಯನ್ನು ನೀಡಿದ್ದೀರಿ..ಖಂಡಿತ ನಿಮ್ಮ ಆಸೆಯೇ ನಮ್ಮ ಆಸೆ ಕೂಡ. ನೀವು ವೈವಿದ್ಯಮಯ ಪಾತ್ರದಲ್ಲಿ ಕಾಣಿಸಬೇಕು.
    "ಧ್ವನಿ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಇಂತಿಷ್ಟು ಕಂಟ್ರೋಲ್ ಬೇಕೇ ಬೇಕು!” ಈ ಮಾತು ಆದ್ಯಾಕೋ ನನ್ನ ಗಮನ ಸೆಳೆಯಿತು. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಹೊಸ ಕನಸಿನ ಪ್ರಾಜೆಕ್ಟಿಗೆ ತುಂಬಾ ಉಪಯೋಗವಾಗುವಂತೆ ಕಾಣುತ್ತಿದೆ. ಆ ಪ್ರಯತ್ನ ಯಶಸ್ವಿಯಾದರೆ ಖಂಡಿತ ನಿಮಗೆ ಫೋನ್ ಮಾಡಿ ಹೇಳುತ್ತೇನೆ. ಮತ್ತೆ ಇನ್ನಷ್ಟು ಎಲ್ಲಾ ಬಣ್ಣದ ಬದುಕಲ್ಲ ಎಲ್ಲಾ ಬದುಕಿನ ಬಗ್ಗೆಯೂ ಬರೆಯುತ್ತಿರಿ..ಓದಲು ನಾವಿದ್ದೇವೆ..

    ReplyDelete
  6. ಬಹಳ ಚೆನ್ನಾಗಿ ಮೂಡಿಬಂದಿದೆ.
    ರಾತ್ರಿಯ ಊಟ 'ಮುಕ್ಕುತ್ತಾ-ಮುಕ್ಕುತ್ತಾ' 'ಮುಕ್ತ-ಮುಕ್ತ' ಧಾರಾವಾಹಿ ನೋಡುವ ಹಲವಾರು ಜನರಲ್ಲಿ ನಾನೂ ಒಬ್ಬ. 'ಮಂಗಳತ್ತೆ' ಗಟ್ಟಿಗಿತ್ತಿ ಎಂದು ನನಗೆನಿಸುತ್ತಿತ್ತು, ಆದರೂ, ವೈಜಯಂತಿ ಕಾಲು ಘಟನೆಯ ನಂತರ ಆ ಪಾತ್ರಕ್ಕೆ ಸಂವೇದನಾ ಶಕ್ತಿ ದೊರಕಿದಂತಾಯಿತು.

    ಕಿರುತೆರೆಯ ಜೊತೆಗೆ, ತಾವು ಪ್ರಚಲಿತ ವಿಚಾರಗಳ ಬಗ್ಗೆ ಹೀಗೆಯೇ ಬ್ಲಾಗ್‌ ಬರೆದು ತಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿರೆಂದು ವಿನಂತಿ.

    ReplyDelete
  7. leKhana tumba channaagi barediddiri. nIvu b.v raadha avara matu keliddu tumba olleyadayitu. yaavattu baruva opportunities naa vaapas kalisabaaradu. ondala ondu dina nimage bEkiruva challenging paatra sikkE suguttade. antaha paatra bareyva lEKhaka bEga sigali anta pray maaDi :)

    ReplyDelete
  8. This comment has been removed by the author.

    ReplyDelete
  9. ಚಂದದ ಬರಹ ಮೇಡಂ
    ನಿಮ್ಮನ್ನ ವೈವಿದ್ಯಮಯ ಪಾತ್ರದಲ್ಲಿ ಕಾಣಲು ನಾವೂ ಇಷ್ಟಪಡುತ್ತೇವೆ....

    ReplyDelete
  10. jayalakshmi madam blog nalli nimma photo noodi,are..ivaryaaro tumba prichayadavarante kaantaarallaa!!!!!!!!,nanna friend yaaraadru irabeku.andukolluvashtaralli nenepaaytu nodi,jotege aashcharya kuuda.nimma lekhana oodidamele ella spashtavaaitu.nimma abhinaya tumba ishtavaaitu,nimma blog kuuda ishtavaaitu.dhanyavaadagalu.

    ReplyDelete
  11. ಕಲರವದ ಒಡತಿಗೆ ಧನ್ಯವಾದಗಳು. :)

    ReplyDelete
  12. ಪ್ರತಿಕ್ರಿಯಿಸಿದ ಎಲ್ಲ ಸ್ನೇಹಿತರಿಗೂ ತುಂಬು ಹೃದಯದ ಧನ್ಯವಾದಗಳು. :)

    ReplyDelete
  13. ಇ೦ದು ಕ೦ಡೆ , ಓದಿದೆ. ಮನಸ್ಸು ತು೦ಬಿ ಬ೦ತು..ಇನ್ನೇನು ಹೇಳಲಿ?

    ReplyDelete