Friday, May 8, 2015

ಕೇವಲ ನಾಲ್ಕೂವರೆ ಸಾವಿರ ರೂಪಾಯಿಗಳಲ್ಲಿ ನಾಟ್ಕಾ ಮಾಡಿಸಿದ್ವಿ!ಹೌದು ಕೇವಲ ನಾಲ್ಕೂವರೆ ಸಾವಿರ ರೂಪಾಯಿಗಳಲ್ಲಿ ನಾಟ್ಕಾ ಮಾಡಿಸಿದ್ದ್ವಿ.

ಎಷ್ಟು ಚೆಂದ ಗೊತ್ತಾ ಮಕ್ಕಳೊಡನಾಟ! ಅಂತೂ ನನ್ನ ಬಾಲ್ಯದ ಟೀಚರ್ ಆಗೊ ಕನಸು ಗೋರೆಗಾಂವ್ ಮುನ್ಸಿಪಾಲ್ಟಿ ಕನ್ನಡ ಶಾಲೆಯ ಮಕ್ಕಳು ನೆರವೇರಿಸಿ ನನ್ನನ್ನ ಧನ್ಯಳಾಗಿಸಿದರನ್ನಿ. ನನ್ನ ಟೀಚರ್‍ಗಿರಿ ಕಂಡು ಕೆಲವೊಮ್ಮೆ ಅವಿನಾಶ್ ಮತ್ತು ಅಕ್ಷತಾ ಇಬ್ಬರಿಗೂ ಆ ಮಕ್ಕಳ ಮೇಲೆ ಕರುಣೆಯೂ ನನ್ನ ಮೇಲೆ ಸಿಟ್ಟೂ ಏಕಕಾಲಕ್ಕೆ ಉಂಟಾಗುತ್ತಿದ್ದವು. ನಾನಾದ್ರೂ ಏನ್ ಮಾಡ್ಲಿ, ಟೀಚರ್‍ಗಿರಿ ಸುಲಭವಲ್ಲ ಅಂದು ಗೊತ್ತಾಗಿದ್ದೇ ಆಗ ನನಗೆ. ಮಕ್ಕಳೆಂದರೆ ಟೀಚರ್ ಹೇಳಿದ ಹಾಗೆ ಕೇಳಬೇಕು ಅನ್ನುವುದು ನನ್ನ ತಲೆಯಲ್ಲಿ ಫಿಕ್ಸ್ ಆಗಿತ್ತು ನನ್ನ ಬಾಲ್ಯದ ಸ್ಟೂಡಂಟ್‍ಗಿರಿಯನ್ನು ಮರೆಸಿ. ಈ ಮಕ್ಕಳೋ ಹೇಳಿ ಕೇಳಿ ಮುಂಬೈ ಮಕ್ಕಳು. ಹೆಚ್ಚಿನವರ ಮನೆಯಲ್ಲಿ ತುಳು ಮಾತಾಡುತ್ತಾರೆ ಮನೆಯಾಚೆ ಹಿಂದಿ ಜೊತೆಗೆ ಓದುತ್ತಿರುವುದು ಮುನ್ಸಿಪಾಲ್ಟಿ ಶಾಲೆಯಲ್ಲಿ! ನಟನೆಯ ಜೊತೆಗೆ ಕನ್ನಡವನ್ನೂ ಹೇಳಿಕೊಡಬೇಕಿತ್ತು ನಾವು!ಪಾಪ ಅವುಗಳಿಗೆ ಕನ್ನಡ ಓದಿ ಮಾತಾಡಿ ಅಂತ ನನ್ನಂಥ ಆದರ್ಶ ತುಂಬಿದ ಹೊಸಾಹೊಸಾ ಹುರುಪಿನ ಟೀಚರ್ ಪ್ರಾಣ ತಿಂದ್ರೆ ಅವಾದ್ರೂ ಏನ್ ಮಾಡಿಯಾವು!? ಏನೂ ಮಾಡ್ತಿರ್ಲಿಲ್ಲ, ನನ್ನ ಸಹನೆ ಪರೀಕ್ಷೆ ಮಾಡ್ತಿದ್ವು ಅಷ್ಟೇ. ಮತ್ತು ನನ್ನ ಸಹನೆ ಎರಡು ಮೂರು ದಿನಕ್ಕೊಮ್ಮೆ ನಪಾಸು ಮಕ್ಕಳೆದುರು... ಆದ್ರೂ ನಾಟ್ಕ ಮುಗಿಯೋವಷ್ಟರಲ್ಲಿ ಅವರಲ್ಲಿ ಮೂರ್ನಾಲ್ಕು ಜನ ಕನ್ನಡವನ್ನ ಮುಂಚಿನ ಹಾಗೆ ತಡಬಡಿಸದೆ ಆರಾಮಾಗಿ ಓದುವಂತಾಗಿದ್ದು ಖುಷಿ ಕೊಟ್ಟ ಸಂಗತಿ.

ಅವರ ಅಪರಿಚಿತತೆಯ ಸಂಕೋಚವನ್ನ ಬಿಡಿಸಿ, ಅದರ ಜಾಗದಲ್ಲಿ ಈ ಟೀಚರ್ ಅಂದ್ರೆ ಭಯ, ಅವಿನಾಶ್ ಸರ್ ಮತ್ತು ಅಕ್ಷತಾ ಟೀಚರ್ ಅಂದ್ರೆ ಪ್ರೀತಿ ಹುಟ್ಟಿಸಿ, ನೆಟ್ಟಗೆ ಒಂದೆಡೆ ನಿಲ್ಲುವುದರಿಂದ ಮೊದಲ್ಗೊಂಡು ಅವರವರ ಪಾತ್ರಗಳನ್ನ ಸಾಧ್ಯವಾದಷ್ಟೂ ಅವರುಗಳಿಗೆ ಅರ್ಥ ಮಾಡಿಸಲು ಯತ್ನಿಸಿ, ಡೈಲಾಗ್ಸ್ ಎಲ್ಲಾ ಅಭಿನಯಪೂರ್ವಕವಾಗಿ ಹೇಳುವಂತೆ ಮಾಡುವಷ್ಟರಲ್ಲಿ ನಾನೊಂದಿಷ್ಟು ಸಹನೆ ಕಲಿತಿದ್ದೆ. ನಾಟಕದ ದಿನ ಗೋರೆಗಾಂವ್ ಸಂಘದ ಎದುರು ಮಿನಿ ಬಸ್ಸನೇರಿದ ಮಕ್ಕಳೊಂದಿಗೆ ನಾನು ಮೃದುವಾಗಿದ್ದೆ. ಟೀಚರ್ ಮರೆಯಾಗಿ ಒರಿಜಿನಲ್ ಜಯಲಕ್ಷ್ಮೀ ಅಂದು ದಾರಿಯುದ್ದಕ್ಕೂ ಮಕ್ಕಳ ಜೊತೆಗಿದ್ದಳು. ಮಕ್ಕಳಿಗೋ ಶುರುವಿನಲ್ಲಿ ತುಸು ದಿಗಿಲು, ಇವ್ರು ಅದೇ ಸಿಡುಕು ಮೋರೆ ಟೀಚರ್ ತಾನೆ ಎಂದು. ಮಕ್ಕಳು ಕರಗೋಕೆ ಎಷ್ಟೊತ್ತು ಬೇಕು ಹೇಳಿ? ಹತ್ತು ಹದಿನೈದು ನಿಮಿಷದಲ್ಲಿ ಮಕ್ಕಳ ಮುಖದ ಬಿಗು ಸಡಿಲಗೊಂಡು ಚೈತನ್ಯದ ಚಿಲುಮೆಗಳಾದ್ರು. ನನಗದೇ ತಾನೇ ಬೇಕಾಗಿದ್ದುದು. ಎರಡು ಮಕ್ಕಳ ತಾಯಿಯಾಗಿ ಮಕ್ಕಳ ಮನಸ್ಥಿತಿ ಗೊತ್ತಿದ್ದರಿಂದ ರಿಹರ್ಸಲ್ ಟೈಮಲ್ಲಿ ತುಸು ಬಿಗುವಾಗಿದ್ದು ಮಕ್ಕಳು ಶಿಸ್ತಿನಿಂದ ಎಲ್ಲವನ್ನೂ ಅಭ್ಯಾಸ ಮಾಡುವಂತೆ ನೋಡಿಕೊಂಡು ನಾಟಕದ ದಿನ ಬಿಗು ಸಡಲಿಸಿದ್ದೇ ಮಕ್ಕಳು ಆತ್ಮವಿಶ್ವಾಸದ ಗಣಿಯಾದರು. ಯಾವುದೇ ಸೆಟ್ ಇಲ್ಲದೆ, ಹಾರ ಬಿಟ್ಟರೆ ಇನ್ನೊಂದು ಪ್ರಾಪರ್ಟಿ ಇಲ್ಲದೆ ನನ್ನ ಕಂದಮ್ಮಗಳು ಕೇವಲ ತಮ್ಮ ಚುರುಕುತನದಿಂದ ಮತ್ತು ಅಭಿನಯದಿಂದ ಅಲ್ಲಿದ್ದ ಪ್ರೇಕ್ಷಕರೆಲ್ಲರ ಮನಸ್ಸನ್ನ ಗೆದ್ದುಬಿಟ್ಟರು. ನಾಟಕ ಮುಗಿದಿದ್ದೇ ಸಭಾಂಗಣದಲ್ಲಿದ್ದ ಅರ್ಧಕ್ಕೂ ಹೆಚ್ಚು ಮಂದಿ ಧಾವಿಸಿ ಸೈಡ್ ವಿಂಗಲ್ಲಿ ಜಮಾಯಿಸಿ ಮಕ್ಕಳನ್ನು ಅಭಿನಂದಿಸಿದ್ದು ನೆನೆದರೆ ನನಗೆ ಇಂದಿಗೂ ರೋಮಾಂಚನ! ಈ ನಾಟಕದಲ್ಲಿ ಕಪ್ಪೆರಾಯನ್ನ ರಾಜಕುಮಾರಿ ಮದುವೆಯಾಗಿ, ಅವನು ಮತ್ತೆ ರಾಜಕುಮಾರನಾಗುವ ಸೀನ್ ಬರುತ್ತೆ. ಅದೆಷ್ಟು ನಾಚಿಕೆ ಅಂತೀರಿ ಮಕ್ಕಳಿಗೆ!! ತಮ್ಮ ನಿಜದ ಮದುವೆಯಲ್ಲಾದ್ರೂ ಅಷ್ಟು ನಾಚ್ಕೊಳ್ತಾವೋ ಇಲ್ವೋ, ರಿಹರ್ಸಲ್ಲಿನಲ್ಲಂತೂ ಮದುವೆ ಮಾಡ್ಸೋಕೆ ಪ್ರತೀ ಸಲ ಹರಸಾಹಸ ಪಡಬೇಕಿತ್ತು. ಮದುವೆ ಆಗೋವು ನಾಚಿಕೊಳ್ಳೋವು, ಉಳಿದ ಮಕ್ಕಳು ಆ ಸೀನ್ ಬಂದ ತಕ್ಷಣ ಕಿಸಿಕಿಸಿ ಅಂತ ನಗೋಕ್ ಶುರು ಮಾಡೋವು! ಎಷ್ಟು ಚೆಂದ ಮತ್ತು ಮುಗ್ಧ ಪ್ರಪಂಚ ಅದು! ಒಂದೊಂದು ಮಗುವೂ ತನ್ನದೇ ತುಂಟತನದಿಂದ, ಸಂಕೋಚದಿಂದ, ತರ್ಲೆಬುದ್ದಿಯಿಂದ ಇಷ್ಟ ಆಗಿತ್ತು. ಚೋಟುದ್ದ ಹುಡುಗನಿಗೂ ಇಗೊ ಕಾಡುತ್ತಿತ್ತು! ಪುಟಾಣಿ ಹೃದಯಕ್ಕೂ ನೋವು ಅರ್ಥ ಆಗ್ತಿತ್ತು!

ಎಲ್ಲ ಮಕ್ಕಳೂ ಮುದ್ದೇ. ಅದರಲ್ಲೂ ಲಕ್ಷ್ಮೀ ಎನ್ನುವ ಬಟ್ಟಲಗಣ್ಣಿನ ಮಗುವಂತೂ ನನಗೆ ಮತ್ತು ಅವಿನಾಶ್‍ಗೆ ಒಂದು ಕೈ ಹೆಚ್ಚೇ ಮುದ್ದು. ಆ ಅಂಥ ಲಕ್ಷೀ ನಾಟಕದ ಮಧ್ಯ ತನ್ನ ಡೈಲಾಗ್ ಹೇಳುವಾಗ ಒಂದು ಶಬ್ದವನ್ನು ಮರೆತಿತು. ಸಾಲನ್ನಲ್ಲ ಶಬ್ದವನ್ನ. ಮರೆತರೂ ಏನೂ ಆಗದವಳಂತೆ ತನ್ನ ಡೈಲಾಗ್ ಮುಗಿಸಿ ಸೈಡ್ ವಿಂಗಿಗೆ ಬಂದವಳ ಬಟ್ಟಲಗಣ್ಣ ತುಂಬಾ ನೀರು! ‘ಟೀಚರ್ ಮರೆತುಬಿಟ್ಟೆ ಟೀಚರ್, ನಾನು ಮರೆತುಬಿಟ್ಟೆ ಟೀಚರ್’ ಎಂದು ಅವಲತ್ತುಕೊಳ್ಳತೊಡಗಿದಳು. ಅವಳು ಹಾಗೆ ಕಣ್ಣುತುಂಬಿಕೊಂಡು ಮರೆತಿದ್ದರ ಬಗ್ಗೆ ಗಿಲ್ಟ್ ಅನುಭವಿಸಿದ ದೃಶ್ಯ ಈಗಷ್ಟೇ ಕಣ್ಣ ಮುಂದೆ ನಡೆದಷ್ಟು ನಿಚ್ಚಳ ನನ್ನ ಮನದಲ್ಲಿ... ನೆಕ್ಸ್ಟ್ ಸೀನ್ ಅವಳದ್ದೇ ಇತ್ತು. ಬೆಕ್ಕಾಗಿ ಮತ್ತೆ ರಂಗಪ್ರವೇಶಿಸಬೇಕಿತ್ತು ಆ ಮಗು. "ನೀನು ತಪ್ಪೇ ಮಾಡಿಲ್ಲ, ನೀನೇ ಹಾಗಂದ್ಕೋತಾ ಇದ್ದಿ, ನೋಡು ಮುಂದಿನ ಸೀನ್ ನಿನ್ನದೇ ಅಲ್ವಾ? ನಗೊ ಬೆಕ್ಕು ಅತ್ರೆ ಚೆನ್ನಾಗಿರುತ್ತಾ?" ಅಂತ ಮುಂತಾಗಿ ಏನೋ ಪೂರ್ತಿ ನೆನಪಿಲ್ಲ, ಅವಳ ಕಿವಿಯಲ್ಲಿ ಪಿಸುಗುಟ್ಟಿ, ನಗಿಸಿ ಸ್ಟೇಜಿಗೆ ಕಳಿಸಿದೆ. ಹಿರೋಯಿನ್ ಸೈಡ್ ವಿಂಗಲ್ಲಿ ಏನೂ ಆಗೇ ಇಲ್ಲ ಅನ್ನೋ ಥರ ನಟಿಸಿ ಮುಗಿದ ಮೇಲೆ ಸೈಡ್ ವಿಂಗಲ್ಲಿ ನಿಂತಿದ್ದ ನನ್ನೆಡೆ ನೋಡಿ ಮುದ್ದಾದ ನಗು ಬೀರಿದಳು, ಚೆನ್ನಾಗ್ ಮಾಡ್ದೆ ತಾನೆ ಎನ್ನುವಂತೆ.
ಲವ್ ಯೂ ಲಕ್ಷ್ಮೀ, ಆಗಾಗ ನೆನಪಾಗ್ತಾ ಇರ್ತಿಯ ಕಂದಾ ನೀನು. ಈಗ ಎಲ್ಲಿದೀಯೋ ಏನ್ ಓದಿದ್ಯೋ, ಏನ್ ಮಾಡ್ತಿದೀಯೊ... ಸುಖವಾಗಿರು ಕೂಸೆ.
ಬಹುಶಃ ೨೦೦೨ ಅಥವಾ ೨೦೦೩ರಲ್ಲಿರಬೇಕು. ನನ್ನ ಮರೆವಿನ ಮಹಾಮಾರಿ ಕೃಪೆಯಿಂದಾಗಿ ಸರಿ ನೆನಪಾಗ್ತಿಲ್ಲ. ಮುಂಬೈನ ಕನ್ನಡ ಕಲಾ ಕೇಂದ್ರ ಮಕ್ಕಳ ನಾಟಕೋತ್ಸವ ಏರ್ಪಡಿಸಿ ನಾಟಕಗಳನ್ನ ಆಹ್ವಾನಿಸಿತ್ತು. ಆಯ್ಕೆಯಾದ ತಂಡಕ್ಕೆ ೨೦೦೦ ರೂಪಾಯಿಗಳ ಗೌರವಧನ ಕೊಡಲಾಗುವುದು ಎಂದಿತ್ತು ಪ್ರಕಟಣೆಯಲ್ಲಿ. ಅದನ್ನು ಓದಿ ಮಕ್ಕಳ ನಾಟಕವನ್ನು ಮಾಡಿಸುವ ಮನಸ್ಸಾಯ್ತು ನನಗೆ. ಅಷ್ಟಾದ್ರೆ ಸಾಕೆ? ನಾಟಕಕ್ಕೆ ಮಕ್ಕಳು ಬೇಡ್ವೆ? ಕಾಸು ಬೇಡ್ವೆ? ವಿಷಯ ಹೊತ್ತು ನನಗೆ ಗೊತ್ತಿರುವ ಎರಡು ಕನ್ನಡ ಸಂಘಗಳನ್ನು ಸಂಪರ್ಕಿಸಿದೆ. ಒಂದು ಮಾಟುಂಗಾ ಕರ್ನಾಟಕ ಸಂಘ. ಇನ್ನೊಂದು ಗೋರೆಗಾಂವ್ ಕರ್ನಾಟಕ ಸಂಘ. ಗೋರೆಗಾಂವ್ ಕರ್ನಾಟಕ ಸಂಘದವರು ರಿಹರ್ಸಲ್‍ಗೆ ಜಾಗ ಕೊಟ್ಟು, ನಾಟಕಕ್ಕೆ ಹೋಗಿಬರುವ ವ್ಯವಸ್ಥೆ ಮಾಡಿಕೊಟ್ಟು ಮೇಲೆ ೨೫೦೦ ರೂಪಾಯಿಗಳನ್ನು ಕೊಡುತ್ತೇವೆ ಅಂದರು. ನನಗೋ ದಿಗಿಲು! ಬರೀ ಎರಡೂವರೆ ಸಾವಿರದಲ್ಲಿ ಹೇಗೆ ನಾಟಕ ಮಾಡಿಸೋದು?! ಕನಿಷ್ಟ ಒಂದೈದು ಸಾವಿರನಾದ್ರೂ ಕೊಡಿ ಎಂದು ಕೇಳಿಕೊಂಡೆ. ಪಾಪ ಅವರುಗಳದ್ದೂ ಮಜಬೂರಿ, ಇಲ್ಲ ೨೫೦೦ ಅಷ್ಟೆ ಕೊಡೋಕಾಗೋದು, ಕನ್ನಡ ಕಲಾಕೇಂದ್ರದವರು ಕೊಡುವ ಹಣವನ್ನೂ ನಾಟಕಕ್ಕೇ ಬಳಸಿಕೊಳ್ಳಿ, ಅದನ್ನೇನು ಸಂಘಕ್ಕೆ ಕೊಡುವುದು ಬೇಡ ಅಂದ್ರು. ಕನ್ನಡ ಕಲಾಕೇಂದ್ರದವರೋ ನಾಟಕ ಮುಗಿದ ಮೇಲೆ ಹಣ ಕೊಡ್ತಾರೆ. ಹಣ ಇಲ್ಲ ಅಂತ ಈಗ ಕೈಬಿಟ್ರೆ... ಊಂಹೂಂ ಬಿಡೋಕೆ ಮನಸಿಲ್ಲ, ಹೇಗಾದ್ರೂ ಸರಿ ಅಷ್ಟರಲ್ಲೇ ಎಷ್ಟಾಗುತ್ತೋ ಅಷ್ಟು ಅಂತ ನಿರ್ಧರಿಸಿ, ಸ್ನೇಹಿತರಾದ ಅವಿನಾಶ್ ಮತ್ತು ಅಕ್ಷತಾರ ಜೊತೆ ಚರ್ಚಿಸಿ, ನಾನು ನಿರ್ದೇಶಿಸೋದು, ಅವಿನಾಶ್ ಸಂಗೀತ ಸಂಯೋಜನೆ ಮತ್ತು ಅಕ್ಷತಾ ಹಾಡೋದು ಅಂತ ಹೊರಟ್ವಿ. ಮಕ್ಕಳ ಜೊತೆಗಿನ ಒಡನಾಟವನ್ನ ಈಗಾಗ್ಲೆ ಹೇಳಿದೀನಿ. ಅದರಾಚೆ ಕೈಯಲ್ಲಿರೊ ಕಾಸು ತಲೆಗೆಳೆದ್ರೆ ಕಾಲಿಗಿಲ್ಲ, ಕಾಲಿಗೆಳೆದ್ರೆ ತಲೆಗಿಲ್ಲ ಅನ್ನೊ ಚಾದರದ ರೀತಿ! ಹೀಗಾಗಿ ಯಾವುದೇ ಸೆಟ್ ಪ್ರಾಪರ್ಟಿ ಗೋಜಿಗೂ ಹೋಗಲೇ ಇಲ್ಲ! ಎಲ್ಲ ಮಕ್ಕಳಿಗೂ ಬಟ್ಟೆ ಕೊಂಡುಕೊಂಡ್ರೆ ಇಲ್ಲಾ ಎಲ್ಲಾ ಬಟ್ಟೆನೂ ಬಾಡಿಗೆ ತಂದ್ರೆ ಕೈಲಿರುವ ಹಣದ ದುಪ್ಪಟ್ಟು ಖರ್ಚಾಗುತ್ತದೆಂದೆಣಿಸಿ, ಅನಿವಾರ್ಯವಾದುದನ್ನಷ್ಟೆ ಬಾಡಿಗೆ ತಂದು, ಒಂದಿಷ್ಟನ್ನು ದಾದರ್‍ನಲ್ಲಿ ಕೊಂಡ್ಕೊಂಡು, ನನ್ನ ಮನೆಯಿಂದೆರೆಡು ಸೀರೆ ಕುಪ್ಪಸ ತಂದು ಅಡ್ಜಸ್ಟ್ ಮಾಡಿದ್ವಿ. ಕಿರಿಟ ಇತ್ಯಾದಿಗಳನ್ನ ರಟ್ಟು ಬೇಗಡಿಯನ್ನೆಲ್ಲಾ ತಂದು ತಯಾರಿಸಿದ್ವಿ. ಅವಿನಾಶ್ ತಮ್ಮ ಸ್ನೇಹಿತರಲ್ಲಿ ಕೇಳಿ ತಬಲಾ ಮತ್ತು ಕೀ ಬೋರ್ಡನ್ನು ತಂದಿದ್ದಲ್ಲದೆ, ಪುಗಸಟ್ಟೆ ತಬಲಾ ನುಡಿಸಲು ಸ್ನೇಹಿತರೊಬ್ಬರ ಮನವೊಲಿಸಿ ಕರೆತಂದಿದ್ದರು. ಅಕ್ಷತಾ ಚೆಂದವಾಗಿ ಹಾಡಿದರು. ನನಗೆ ತಿಳಿದಂತೆ ಮೇಕಪ್ ಮಾಡಿದೆ. ಅಂತೂ ಇಂತೂ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದ, ಕನ್ನಡ ಸರಿ ಬಾರದ ಮಕ್ಕಳಿಂದ ನೋಡಿದವರೆಲ್ಲಾ ಎಂಥಾ ಎನರ್ಜಿಟಿಕ್ ಆಗಿ ನಾಟ್ಕಾ ಮಾಡಿದ್ವು ಮಕ್ಳು ಅನ್ನುವಂತೆ ನಾಟಕ ಮಾಡಿಸಿದ್ವಿ.
ಅಂದ ಹಾಗೆ ಆ ನಾಟಕದ ಹೆಸರು ‘ಢಾಣಾಡಂಗುರ’. ವೈದೇಹಿಯವರು ಬರೆದ ಮಕ್ಕಳ ನಾಟಕಗಳಲ್ಲಿ ಒಂದಿದು.
ನಾಟಕದ ರಿಹರ್ಸಲ್‍ನ ಬ್ರೇಕ್ ಹೊತ್ತಲ್ಲಿ ಕೀಬೋರ್ಡ್ ನುಡಿಸುತ್ತಾ, ಅವಿನಾಶ್ ಹಾಡಿಕೊಳ್ಳುತ್ತಿದ್ದ ಹಾಡು ಕಿವಿ ಮೇಲೆ ಬಿದ್ದಾಗಲೆಲ್ಲ ಆ ಮಕ್ಕಳು, ನಾಟಕ, ಲಕ್ಷ್ಮೀ ಎಲ್ಲಾ ನೆನಪಾಗುತ್ತೆ.

No comments:

Post a Comment