ಸಿನಿಮಾ ಪ್ರಿಯರ ಭಾವ ಜಗತ್ತನ್ನಾಳುತ್ತದೆ ಸಿನಿಮಾ. ಬಾಲ್ಯ ಮತ್ತು ಹರೆಯದಲ್ಲಂತೂ ಅದು ಅನೇಕ ವಿಷಯಗಳನ್ನು ಮನದೊಳಗೆ ಎರಕ ಹುಯ್ದ ಪರಿ, ನಮ್ಮ ಕೆಲವು ಅನಿಸಿಕೆಗಳನ್ನು ಪರಾಮರ್ಶಿಸಿ ನೋಡಿಕೊಂಡಾಗ ಅರಿವಿಗೆ ಬರುತ್ತದೆ. ಸಿನಿಮಾದಲ್ಲಿನ ನಾಯಕ/ನಾಯಕಿಯರ ಪಾತ್ರಗಳ ನಡುವಳಿಕೆ, ಉಡುಗೆ ತೊಡುಗೆ ನಮ್ಮ ಇಷ್ಟಗಳಾಗುತ್ತವೆ. ಸಿನಿಮಾದಲ್ಲಿ ಅಭಿನಯಿಸುವವರು ದೇವಲೋಕದಿಂದ ಬಂದವರೆಂಬಂತೆ, ಅವರು ತುಂಬಾ ಅದೃಷ್ಟಶಾಲಿಗಳು, ತುಂಬಾ ಶ್ರೀಮಂತರು, ಕಾರಲ್ಲೇ ಓಡಾಡ್ತಾರೆ, ಹೂವಿನ ಹಾಸಿಗೆ ಮೇಲೆ ನಡೆದಾಡುತ್ತಾರೆ. ಅರಮನೆಯಂಥ ಮನೆಯಲ್ಲಿ ವಾಸಿಸುತ್ತಾರೆ ಎಂದು ಭಾವಿಸುತ್ತೇವೆ. ಅವರಂಥಾ ಸುಖಿಗಳು ಈ ಜಗತ್ತಲ್ಲೇ ಇಲ್ಲ ಎಂದುಕೊಳ್ಳುತ್ತೇವೆ, ಈ ಲೋಕವನ್ನು ಪ್ರವೇಶಿಸುವವರೆಗೂ. ಪ್ರೇಕ್ಷಕನಿಗೆ ಸಿನಿಮಾ ಎಂದರೆ ದಟ್ಟ ಆಕರ್ಷಣೆ.
ಯಾರ್ಯಾರೋ ಅರ್ಧಮರ್ಧ ಹೇಳಿದ ಮಾತುಗಳನ್ನು ಕೇಳಿ, ಸಿನಿಮಾದಲ್ಲಿ ನಟಿಸುವ ಹೆಣ್ಣುಮಕ್ಕಳು ಘಳಿಗೆಗೊಂದು ಬಟ್ಟೆ ಬದಲಿಸುತ್ತಾ, ಅಲಂಕಾರ ಮಾಡಿಕೊಂಡು, ಸ್ಟೈಲ್ ಆಗಿ ಒಂದೆರಡು ಡೈಲಾಗ್ ಹೇಳಿ, ಕುಣಿದು ಕುಪ್ಪಳಿಸಿ, ಕಣ್ಣಿಗೆ ಗ್ಲೀಸರಿನ್ ಹಚ್ಕೊಂಡು ನಾಲ್ಕಾರು ಕಣ್ಣೀರು ಉದುರಿಸಿ ರಾಶಿ ಹಣ ಬಾಚ್ಕೊಂಡು ಮನೆಗೆ ಮರಳುತ್ತಾರೆ. ಜೊತೆಗೆ ಜನಪ್ರಿಯತೆ, ಹೆಸರು, ಅವ್ರಿಗೇನ್ ಕಮ್ಮಿ! ಎಂದುಕೊಳ್ಳುತ್ತದೆ ಹೊರಗಿನ ಲೋಕ. ಕಾಸೆಸೆದ್ರೆ ಸಿನಿಮಾ ನಟಿಯರು ಹಾಸಿಗೆಗೆ ಬರ್ತಾರಂತೆ/ಬರ್ತಾರೆ ಎನ್ನುವ ಕೀಳು ಅಭಿಪ್ರಾಯವೂ ಇದೆ. ಇದು ಅರ್ಧ ಸತ್ಯ ಎಂದು ಬಿಡಿಸಿ ಹೇಳಲು ಹೋದರೆ ಕೇಳುವವರಿಗೆ ಕಟ್ಟುಕತೆ ಎಂಬಂತೆ ಭಾಸವಾಗುತ್ತದೆ.
ಹೇಗಿದೆ ಸಿನಿಮಾದ ಮಹಿಳಾ ಜಗತ್ತು?
ಚೆನ್ನಾಗಿದೆ. ಹೆಚ್ಚು ಚೆನ್ನಾಗಿಲ್ಲ. ಪ್ರತಿಭೆ ಇದ್ದು ಅವಕಾಶಗಳು ದೊರೆತಲ್ಲಿ ದೊಡ್ಡ ಮಟ್ಟದ ಹೆಸರಾಗುತ್ತದೆ. ಕೆಲಸದ ಬಗ್ಗೆ ತೃಪ್ತಿ ಇರುತ್ತದೆ. ಜನ ಗುರುತಿಸುತ್ತಾರೆ. ಪ್ರೀತಿ ತೋರುತ್ತಾರೆ. ಸಭೆ ಸಮಾರಂಭಗಳಿಗೆ ಕರೆದು ಸನ್ಮಾನಿಸುತ್ತಾರೆ. ಆ ಮೂಲಕ ಮನಸಿಗೊಂದಷ್ಟು ನೆಮ್ಮದಿ ದೊರೆಯುತ್ತದೆ. ಇದೇನು ಸಣ್ಣದ್ದಲ್ಲ, ಇದಿಷ್ಟನ್ನ ಹೇಳಿದರೆ ಚೆನ್ನಾಗಿದೆ ಎನ್ನುವ ವಿಭಾಗ ಮುಗಿದಂತೆ. ಆದ್ರೆ ಈ ಅದೃಷ್ಟ ಎಲ್ಲ ನಟಿಯರಿಗಿರುವುದಿಲ್ಲ.
ನಟಿ ಎಂದರೆ ನಾಯಕಿ ಪಾತ್ರ ಮಾಡುವವರು ಮಾತ್ರ ಅಲ್ಲ. ಅನೇಕ ಪೋಷಕ ಪಾತ್ರಗಳನ್ನು ನಿರ್ವಹಿಸುವವರೂ, ಜ್ಯೂನಿಯರ್ಸ್ ಅಥವಾ ಹಿಂದೆ ಹೇಳುತ್ತಿದ್ದಂತೆ ಎಕ್ಸ್ಟ್ರಾಗಳು ಎಂದು ಕರೆಸಿಕೊಳ್ಳುವ ಅನೇಕ ಮಹಿಳೆಯರೂ ನಟಿಯರೇ. ಅವರುಗಳಿಗೆ ಇಂಥ ಅವಕಾಶಗಳು ಅಪರೂಪ. ಜ್ಯೂನಿಯರ್ಸ್ ಗಂತೂ ಶೂಟಿಂಗ್ ಹೊತ್ತಲ್ಲಿ ಫ್ರೀ ಊಟ, ತಿಂಡಿ, ಕಾಫಿ ಸಿಗುತ್ತದೆ ಮತ್ತು ದೊರೆವ ಸಂಬಳ ಒಂದು ಹೊತ್ತಿನ ಊಟಕ್ಕಾದರೆ ಸಾಕು ಎನ್ನುವ ಸ್ಥಿತಿ.
ಇಲ್ಲಿ ಯಾವತ್ತೂ ಮಹಿಳೆಗೆ ಎರಡನೇ ದರ್ಜೆ. ಪ್ರಾರಂಭದಲ್ಲಿ ಚಿತ್ರರಂಗದ ಹೆಣ್ಣುಮಕ್ಕಳು ಎಂದರೆ ಕೇವಲ ನಟಿ ಅಥವಾ ಹಿನ್ನೆಲೆ ಗಾಯಕಿಯರಾಗಿರ್ತಿದ್ದ್ರು. ರಾಜಾಶ್ರಯ ದೊರೆತು, ಸತತ ಅಭ್ಯಾಸ ಮತ್ತು ಸಿದ್ಧ ಪಠ್ಯ ಹಾಗು ವಿಧಾನಗಳ ಕಲಿಕೆಯಿಂದಾಗಿ ಗಾಯನಕ್ಕೆ ಮತ್ತು ನಾಟ್ಯಕ್ಕೆ ಶಾಸ್ತ್ರೀಯ ಪಟ್ಟ ದೊರೆಯಿತು. ಅವೆರಡರಲ್ಲೂ ಸಾಧನೆ ಮಾಡಿದವರಿಗೆ ಸಿಗುವ ಗೌರವವನ್ನು ಹೋಲಿಸಿ ನೋಡಿದರೆ ನಟನಾವರ್ಗಕ್ಕೆ ಸಲ್ಲುವ ಗೌರವ ಕಡಿಮೆ. ನಟನೆಗಾಗಿ ಕೋರ್ಸುಗಳು ಶುರುವಾಗಿದ್ದು ಇತ್ತೀಚಿನ ೩೫-೪೦ ವರ್ಷಗಳ ಬೆಳವಣಿಗೆ. ಯಾವುದೇ ಅಕಾಡೆಮಿಕ್ ಕಲಿಕೆ ಇಲ್ಲದೇ ಕೇವಲ ಪ್ರತಿಭೆಯಿಂದ ಅದ್ಭುತ ನಟ, ನಟಿ ಅನಿಸಿಕೊಂಡವರು ಅನೇಕರಿದ್ದಾರೆ. ಮಿತಿಗಳನ್ನು ಮೀರಿ ಪರಕಾಯ ಪ್ರವೇಶ ಮಾಡುವುದೇ ನಟನೆಯಾದ್ದರಿಂದ ಅದು ನಾಲ್ಕು ಗೋಡೆಗಳ ಚೌಕಟ್ಟುಗಳನ್ನು ಮೀರಿದ ವಿದ್ಯೆ. ಇಂಥ ವಿದ್ಯೆಯ ಬಲ್ಲವರು ನಟ ನಟಿಯರು. ಆದರೂ ನಟಿಯೆಂದರೆ ಲೋಕ ನೋಡುವುದೇ ಬೇರೆ ಕಣ್ಣಿನಿಂದ.
ಚಿತ್ರರಂಗದಲ್ಲಿ ಪ್ರವೇಶಿಸಿದ ಎಷ್ಟೋ ದಶಕಗಳ ನಂತರ ಹೆಣ್ಣುಮಕ್ಕಳು ಉಳಿದ ವಿಭಾಗಗಳತ್ತ ಆಸಕ್ತಿವಹಿಸತೊಡಗಿದರು. ಆದರೂ ಇಂದಿಗೂ ಚಿತ್ರರಂಗದ ಹೆಣ್ಣುಮಕ್ಕಳು ಎಂದೊಡನೆಯೇ, ಮೊದಲು ಮಿದುಳು ಸಿಗ್ನಲ್ ಕೊಡುವುದು ನಟಿಯರೆಂದೇ. ನಿರ್ಮಾಣ, ನಿರ್ದೇಶನ, ಛಾಯಾಗ್ರಹಣ, ಎಡಿಟಿಂಗ್, ಸಂಗೀತ ಸಂಯೋಜನೆ, ನೃತ್ಯ ಸಂಯೋಜನೆ, ಚಿತ್ರಕತೆ, ಸಂಭಾಷಣೆ, ವಸ್ತ್ರಾಲಂಕಾರ, ಕೇಶ ವಿನ್ಯಾಸ ಹೀಗೆ ಅನೇಕ ವಿಭಾಗಗಳಲ್ಲಿ ಹೆಣ್ಣುಮಕ್ಕಳು ತಮ್ಮನ್ನು ತೊಡಗಿಸಿಕೊಂಡಿದ್ದಾರಾದರೂ, ಅವಕಾಶಗಳು ಈಗಲೂ ಕಡಿಮೆ. ಅದರಲ್ಲೂ ಛಾಯಾಗ್ರಹಣ ವಿಭಾಗದಲ್ಲಂತೂ ತೀರಾ ಬೆರಳೆಣಿಕೆಯ ಜನ ಮಹಿಳೆಯರಿದ್ದಾರೆ. ನೆನಪಿಸಿಕೊಂಡು ಹೆಸರು ಹೇಳಲು ಒಂದು ಹೆಸರೂ ಥಟ್ಟನೆ ನೆನಪಿಗೆ ಬರುವುದಿಲ್ಲ! ಒಮ್ಮೆ ನನಗೆ ಗೀತ ರಚನಾಕಾರ್ತಿಯರು ಎಷ್ಟು ಜನರಿದ್ದಾರೆ ನಮ್ಮ ಭಾರತೀಯ ಚಿತ್ರರಂಗದಲ್ಲಿ ಎನ್ನುವ ಕುತೂಹಲ ಉಂಟಾಗಿ, ಫೇಸ್‍ಬುಕ್ಕಿನಲ್ಲೊಂದು ಪೋಸ್ಟ್ ಹಾಕಿದ್ದೆ. ಗೀತರಚನೆಯನ್ನು ಮಾಡುತ್ತಿರುವವರು ಒಂದಿಷ್ಟು ಜನ ಇದ್ದಾರಾದರೂ ಅವರದ್ದ್ಯಾರದ್ದೂ ಜನ ಗುರುತಿಸುವಂಥ ದೊಡ್ದ ಹೆಸರಿಲ್ಲ ಗೀತ ರಚನಾಕಾರರಾಗಿ.
ಇತ್ತೀಚಿಗೆ ಎಲ್ಲ ವಿಭಾಗದಲ್ಲೂ ಮಹಿಳೆಯರೇ ಇರುವಂಥ, ಗಟ್ಟಿ ಕಥೆಗಳುಳ್ಳ ಧಾರಾವಾಹಿಯೊಂದನ್ನು ನಿರ್ಮಿಸಬೇಕು ಎನ್ನುವ ನನ್ನ ಯೋಜನೆಯನ್ನು, ನನ್ನ ಗೆಳತಿ, ಕಿರುತೆರೆ ನಟಿ ದೀಪಾ ರವಿಶಂಕರ್ ಅವರೊಂದಿಗೆ ಚರ್ಚಿಸುತ್ತಿದ್ದೆ. ಕ್ಯಾಮೆರಾ ವರ್ಕಿಗೆ ಹೆಣ್ಣುಮಕ್ಕಳ್ಯಾಕೆ ಹೆಚ್ಚು ಬರ್ತಿಲ್ಲ, ಹೆಗಲ ಮೇಲೆ ಕ್ಯಾಮೆರಾ ಹೊರುವ ಪ್ರಸಂಗ ಬಂದಲ್ಲಿ ಆಗೋದಿಲ್ಲ ಅಂತಲಾ ಎಂದಾಗ, ದೀಪಾ ಹೇಳಿದರು. “ಅದೆಲ್ಲ ಏನಿಲ್ಲ. ಆದ್ರೆ ಲೈಟ್ ಬಾಯ್ಸ್ ಮಾತು ಕೇಳಲ್ಲ ಜಯಾ. ಮನಸಿಗೆ ಬಂಧಂಗಾಡ್ತಾರೆ. ಹೆಣ್ಮಕ್ಕಳು ಬೈದ್ರೂ ಅವ್ರಿಗೆ ಹತ್ತಲ್ಲ. ಅದೇ ಗಂಡಸು, ತುಟಿ ನಾಲಿಗೆ ಕಚ್ಚಿ, ‘ಅಯ್ಯಾ ನಿನ್ನಯ್…’ ಅಂತ ಆವಾಜ್ ಹಾಕಿದ್ರೆ ಸಾಕು ಬಾಲ ಮುದರ್ಕೊಂಡು ಮಾತು ಕೇಳ್ತಾರೆ. ಇದನ್ನ ನನಗೆ ಹೇಳಿದ್ದೂ ಒಬ್ಬ ಕ್ಯಾಮೆರಾಮನ್‍ಯೇ” ಎಂದರು.
ಲೈಟ್ ಬಾಯ್ಸ್ ಅಥವಾ ಈಗ ಅನ್ನುವಂತೆ ಲೈಟ್ ಆಫೀಸರ್ಸ್, ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಕಲಿತಿರದ, ದೈಹಿಕ ಪರಿಶ್ರಮದ, ಬೆಳಕಿನ ನಿರ್ವಹಣೆಯ ಜವಾಬ್ದಾರಿಯ ತಾಂತ್ರಿಕ ವರ್ಗ. ಅವರುಗಳಿಂದ ಮೊದಲ್ಗೊಂಡು ನಿರ್ದೇಶಕ, ನಿರ್ಮಾಪಕರವರೆಗೆ ಚಿತ್ರರಂಗದಲ್ಲಿ ದುಡಿವ ಮಹಿಳೆ ಒಂದಲ್ಲ ಒಂದು ವಿಧದಲ್ಲಿ ಒಬ್ಬರಲ್ಲ ಒಬ್ಬರಿಂದ ಶೋಷಣೆಗೊಳಗಾಗ್ತಲೇ ಬಂದಿದಾಳೆ. ಈಗಿನ ತಲೆಮಾರಿನ ಹುಡುಗರ ಟೀಮಿನಲ್ಲಿ ಮೊದಲಿನಷ್ಟು ಶೋಷಣೆ ಕಂಡು ಬರುವುದಿಲ್ಲವಾದರೂ ಶೋಷಣೆ ನಿಂತಿಲ್ಲ ಎನ್ನುವುದಕ್ಕೆ ಇತ್ತೀಚಿನ ಲೈಂಗಿಕ ಕಿರುಕುಳದ ವಿರುದ್ಧದ ಆಂದೋಲನ Me Too ದಲ್ಲಿ ಕೇಳಿ ಬಂದ ದನಿಗಳೇ ಸಾಕ್ಷಿ!
ತರಾನಾ ಬರ್ಕ್ ಎನ್ನುವ ಅಮೇರಿಕಾದ ಸಾಮಾಜಿಕ ಹೋರಾಟಗಾರ್ತಿ, ೨೦೦೬ರಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ದ ಶುರು ಮಾಡಿದ Me Too ಹೆಸರಿನ ಆಂದೋಲನ ಭಾರತಕ್ಕೆ ಕಾಲಿಟ್ಟಿದ್ದು ೨೦೧೭ರ ಅಕ್ಟೋಬರ್‍ನಲ್ಲಿ. ಒಂದು ವರ್ಷದ ನಂತರ, ಚಿತ್ರರಂಗದ ನೊಂದ ಮಹಿಳೆಯರೂ ಒಬ್ಬರಾದ ಮೇಲೆ ಒಬ್ಬರಂತೆ ಅನೇಕರು ತಮ್ಮೊಂದಿಗಾದ ಲೈಂಗಿಕ ಕಿರುಕುಳವನ್ನು ಧೈರ್ಯದಿಂದ ಹೇಳಿಕೊಳ್ಳತೊಡಗಿದೊಡನೆಯೇ, ಆಂದೋಲನ ತೀವ್ರತೆ ಪಡೆದುಕೊಂಡು ದೊಡ್ಡ ಬಿರುಗಾಳಿಯನ್ನೇ ಸೃಷ್ಟಿ ಮಾಡಿತು. ಪುರುಷ ಪ್ರದಾನ ಸಮಾಜದ ಬೇರುಗಳು, ಎಲ್ಲಿ ಎಲ್ಲವೂ ಬುಡಮೇಲಾಗುವುದೋ ಎನ್ನುವ ಹೆದರಿಕೆಯಲ್ಲಿ ತಮ್ಮ ಹಿಡಿತವನ್ನು ಇನ್ನಷ್ಟು ಬಿಗಿ ಮಾಡುತ್ತಾ ತಪ್ಪನ್ನೆಲ್ಲ ಪ್ರತಿಭಟಿಸುತ್ತಿರುವ ಹೆಣ್ಣುಮಕ್ಕಳ ತಲೆಗೇ ಕಟ್ಟಲು ನೋಡಿದವು. ಸಿಕ್ಕಿದ್ದೇ ಅವಕಾಶ ಎಂಬಂತೆ ಕ್ರಿಮಿಕೀಟಗಳಂಥವರು ದನಿ ಎತ್ತಿದ ನಟಿಯರನ್ನು ತುಂಬಾ ಕೀಳಾದ ಅವಾಚ್ಯ ಮಾತುಗಳಲ್ಲಿ, ಫೇಸ್‍ಬುಕ್, ಟ್ವಿಟ್ಟರುಗಳಲ್ಲಿ ಜರಿದು ತೃಪ್ತಿ ಹೆಮ್ಮೆ ಪಟ್ಟು, ತಮ್ಮ ಸಂಸ್ಕಾರವನ್ನು ಮೆರೆದರು! ಹಾಗೆ ದನಿಯೆತ್ತಿದ ಕನ್ನಡದ ನಟಿಯರಲ್ಲಿ ಸಂಗೀತಾ ಭಟ್ ಮೊದಲಿಗರಾದರೂ, ಅವರಿಗೆ ಸಾಕಪ್ಪಾ ಸಾಕು ಈ ಚಿತ್ರರಂಗದ ಸಹವಾಸ ಎನ್ನುವಂತೆ ಮಾಡಿ ಅಳಿಸಿಬಿಟ್ಟರು. ಬೆದರಿಕೆಗಳಿಗೆಲ್ಲ ಹೆದರದೇ ತಮ್ಮ ಮಾತಿಗೆ ಬದ್ಧರಾಗಿ ನಿಂತವರೆಂದರೆ ಶೃತಿ ಹರಿಹರನ್. ಕನ್ನಡ ಚಿತ್ರರಂಗದ ದಿಟ್ಟೆ ಮಹಿಳೆ ಆಕೆ. ಆಕೆಯಂತೆ ಕಿರುಕುಳ ಅನುಭವಿಸಿದ ಇತರ ನಟಿಯರು ಅವರ ಬೆಂಬಲಕ್ಕೆ ನಿಂತಿದ್ದರೆ ಕನ್ನಡ ಚಿತ್ರರಂಗದ ಭವಿಷ್ಯದ ಚಿತ್ರಣವೇ ಬೇರೆಯಾಗಿರೋದು. ಆದರೆ ಹಾಗಾಗಲಿಲ್ಲ. ಚಿತ್ರರಂಗದಲ್ಲಿ (ಯಾವುದೇ ಭಾಷೆಯದ್ದಾಗಿರಲಿ) ಲೈಂಗಿಕ ಕಿರುಕುಳ ಅದೆಷ್ಟು ಸಹಜವಾಗಿ ಹೋಗಿದೆ ಎಂದರೆ ಆಪಾದನೆಗೊಳಗಾದ ನಟ ಅರ್ಜುನ್ ಸರ್ಜಾರ ಪರವಾಗಿ ಅವರ ತಾಯಿ ಮಾಧ್ಯಮದವರೆದುರು ಮಾತನಾಡುತ್ತ, ಶೃತಿಯವರನ್ನು ಬೈಯುತ್ತಾ, “ಚಿತ್ರರಂಗಕ್ಕೆ ಎಷ್ಟೋ ಜನ ಹೆಣ್ಮಕ್ಳು ಬರ್ತಾರೆ. ಸಣ್ಣಪುಟ್ಟ ಕಿರುಕುಳ ಇದೆ, ಇಲ್ಲ ಅಂತ ಹೇಳ್ತಿಲ್ಲ ನಾನು. ಆದ್ರೆ ಅವ್ರೆಲ್ಲ ಮರ್ಯಾದೆಯಾಗಿ ಸುಮ್ನೆ ಹೋಗ್ತಿಲ್ವೆ ಈಗ? ಇವ್ಳೇನ್ ಮಹಾ ಇವಳ್ ಥರ ಬಂದ್ಬಿಟ್ಟು..” ಇತ್ಯಾದಿಯಾಗಿ ಆಡಿದ ಮಾತುಗಳೇ ಸಾಕು ಚಿತ್ರರಂಗದಲ್ಲಿ ಮಹಿಳೆಯರ ಸ್ಥಾನಮಾನಕ್ಕೆ ಸಿಗುವ ಗೌರವದ ಬಗ್ಗೆ ಅರಿಯಲು. ಮೀ ಟೂ ಆಂದೋಲನಕ್ಕೂ ಮೊದಲೂ ಕೆಲವು ಹೆಣ್ಣುಮಕ್ಕಳು ತಮ್ಮೊಂದಿಗಾದ ಕಿರುಕುಳ ಮತ್ತು ಅನ್ಯಾಯದ ವಿರೋಧಿಸಿದ್ದು ಮಾಧ್ಯಮಗಳಲ್ಲಿ ನಾಲ್ಕಾರು ದಿನಗಳ ಸುದ್ದಿಗಳಾಗಿ ಮರೆಯಾಗಿವೆ. ನ್ಯಾಯ ಸಿಕ್ಕಿದ್ದು ಮಾತ್ರ ಇಲ್ಲಿಯವರೆಗೂ ಎಲ್ಲೂ ಕೇಳಿಲ್ಲ. ಇದನ್ನೆಲ್ಲ ಪ್ರಶ್ನಿಸಿ, ‘ಹಾಗಿದ್ದ್ರೆ ಸುಮ್ನೆ ಮನೇಲಿರಿ. ಇಲ್ಲಿಗ್ ಬಾ ಅಂದೋರ್ಯಾರು ನಿಮ್ಮನ್ನ?’ ಎನ್ನುವ ಧಾರ್ಷ್ಟ್ಯದ ಉತ್ತರ ಪಡೆದವರದೆಷ್ಟೋ ಜನ. ಅವಕಾಶಗಳು ಬೇಕಿದ್ದಲ್ಲಿ ಹೆಣ್ಣು ಸಹಿಸಿಕೊಂಡು ಸುಮ್ಮನಿರಬೇಕು ಎನ್ನುವುದು ಅಲ್ಲಿನ ಕೆಲವರ ಧೋರಣೆಯಾಗಿಬಿಟ್ಟಿದೆ. ಬದುಕಿನ ಸೂಕ್ಷ್ಮಗಳನ್ನು, ಮಾನವನ ಭಾವನೆಗಳನ್ನು ಸಮರ್ಥವಾಗಿ ಜನರಿಗೆ ತಲುಪಿಸುವಂಥ ಕ್ಷೇತ್ರದ ಕ್ರೌರ್ಯ ಇದು!
ತಾರತಮ್ಯ
ಸಮಾಜದಲ್ಲಿ ತಾರತಮ್ಯ ಎಷ್ಟೋ ಮಟ್ಟಿಗೆ ಕಮ್ಮಿಯಾಗಿದೆ. ಆದರೆ ಚಿತ್ರರಂಗದಲ್ಲಿ? ಊಟ, ಮೇಕಪ್‍ನಿಂದ ಮೊದಲ್ಗೊಂಡು ಸಂಭಾವನೆ, ನೋಡುವ, ಮಾತಾಡಿಸುವ ರೀತಿಯಲ್ಲೂ ವ್ಯತ್ಯಾಸಗಳು ನಿಚ್ಚಳವಾಗಿ ಕಾಣಿಸುತ್ತವೆ.
ವಯಸ್ಸು, ಅಂದ ಚೆಂದ
ಸಿನಿಮಾ ಕ್ಷೇತ್ರದಲ್ಲಿ ನಾಯಕ ನಟನಿಗೆ ಎಷ್ಟೇ ವಯಸ್ಸಾದರೂ, ಹೇಗೇ ಇದ್ದರೂ ಆತ ಹರೆಯದ ನಾಯಕ ನಟನಾಗಿಯೇ ಮುಂದುವರೆಯುತ್ತಾನೆ ಮತ್ತು ಆತನ ಎದುರಿಗೆ ನಾಯಕಿಯಾಗಿ ಅಭಿನಯಿಸುವ ಹೆಣ್ಣು ಸುಂದರಿಯಾಗಿದ್ದು ಹದಿಹರೆಯದವಳೇ ಆಗಿರಬೇಕು. ಹರೆಯದಲ್ಲಿ ನಾಯಕಿಯಾಗಿ ಜೊತೆಗೆ ನಟಿಸಿದ್ದ ಹೆಣ್ಣುಮಗಳು ಈಗ ನಾಯಕಿಯಾಗುವ ಹಾಗಿಲ್ಲ. ನಾಯಕಿಯಾದವಳಿಗೆ ಮದುವೆಯಾದರೆ ಸಾಕು, ನಾಯಕಿಯ ಪಟ್ಟದ ಕಿರಿಟ ಕಳಿಚಿಡಬೇಕು. ಒಂದೋ ಬಂದ ಪಾತ್ರಗಳನ್ನು ಒಪ್ಪಿಕೊಂಡು ಚಿತ್ರರಂಗದಲ್ಲಿ ಮುಂದುವರೆಯಬೇಕು ಇಲ್ಲವೇ ತೆರೆಮರೆಗೆ ಸರಿದುಬಿಡಬೇಕು. ಮಹಿಳಾ ಪ್ರಧಾನ ಚಿತ್ರಗಳು ಬಂದಲ್ಲಿ ಒಂದಿಷ್ಟು ನಾಯಕಿಯಾಗುವ ಅವಕಾಶವಿರುತ್ತದೆ. ಆದರೆ ಅಂಥ ಚಿತ್ರಗಳೇ ಬರುವುದು ಕಡಿಮೆ ಅಲ್ಲವೆ! ಈಗಿನ ಜನರೇಶನ್ನಿನ ನಾಯಕ ನಟ ನಟಿಯರಾದರೂ ಈ ದರಿದ್ರ ಪರಂಪರೆಯನ್ನು ಮುರಿದು, ತಮ್ಮ ವಯಸ್ಸಿಗೆ, ಪಾತ್ರಕ್ಕೆ ತಕ್ಕ ಸಹ ಕಲಾವಿದರೊಡನೆ ನಟಿಸುವಂತಾಗಬೇಕು.
ಸಂಭಾವನೆ
ಎರಡು ವರ್ಷಗಳ ಹಿಂದೆ ಟಿವಿ ಚಾನಲ್ ಸಂದರ್ಶನ ಒಂದರಲ್ಲಿ, ಕನ್ನಡ ಚಿತ್ರರಂಗದ ನಾಯಕಿಯರಲ್ಲಿ ಒಬ್ಬರಾದ ಐಂದ್ರಿತಾ ರೇ ಅವರು, ‘ನಾಯಕ ನಟರಿಗೆ ಐವತ್ತು ಲಕ್ಷ, ಒಂದು ಕೋಟಿ ಸಂಭಾವನೆಯಾದರೆ ನಮಗೆಲ್ಲ ಐದು ಲಕ್ಷಕ್ಕೆ ಮೀರಿ ಯಾರೂ ಸಂಭಾವನೆ ಕೊಡುವುದಿಲ್ಲ. ನಾವೂ ಅವರಷ್ಟೇ ಶ್ರದ್ಧೆ ಮತ್ತು ಶ್ರಮವಹಿಸಿ ಸಮಸಮಕ್ಕೆ ಕೆಲಸ ಮಾಡ್ತೀವಿ. ಆದ್ರೆ ಸಂಭಾವನೆ ಮಾತ್ರ ಕಡಿಮೆ. ಈ ತಾರತಮ್ಯ ನಿಲ್ಲಬೇಕು’ ಎನ್ನುವ ಮಾತುಗಳನ್ನಾಡಿದ್ದು ಕೆಲವರಿಗಾದ್ರು ನೆನಪಿರಬೇಕು. ಐಂದ್ರಿತಾ ರೇ ಅವರ ಮಾತಿಗೆ ಆಗ ಇನ್ನೊಂದಿಬ್ಬರು ನಾಯಕಿಯರೂ ದನಿಗೂಡಿಸಿದಂತೆ ನೆನಪು. ಅದೊಂದು ದೊಡ್ಡ ಸುದ್ದಿಯಾದಷ್ಟೇ ವೇಗವಾಗಿ ಅದರ ಸದ್ದೂ ಅಡಗಿತ್ತು. ಸರಿಯಾಗಿ ಅದದೇ ಪದಗಳನ್ನಿಲ್ಲಿ ದಾಖಲಿಸಲೆಂದು, ಆ ವಿಡಿಯೊ ಗೂಗಲಿನಲ್ಲಿ ಸಿಗಬಹುದೇನೋ ಎಂದು ಹುಡುಕಲು ಹೋದೆ. ಸಿಗಲಿಲ್ಲ. ಬದಲಿಗೆ ಅಂತರ್ಜಾಲ ಪತ್ರಿಕೆಯೊಂದರ ಗಾಸಿಪ್ ಕಾಲಮ್ಮಿನಲ್ಲಿ, ಕನ್ನಡದಲ್ಲಿ ಹೆಚ್ಚು ಸಂಭಾವನೆ ಪಡೆವ ಐದು ಜನ ನಟಿಯರ ವಿವರಗಳಲ್ಲಿ ಅವರ ವಯಸ್ಸಿನ ವಿವರ, ಜನ್ಮ ದಿನಾಂಕ ಸಮೇತ ಇತ್ತು! ಅಲ್ಲಿ ಅವರುಗಳ ಜನ್ಮ ದಿನಾಂಕವನ್ನು ನಮೂದಿಸಬೇಕಾದ ಅವಶ್ಯಕತೆ ಏನಿತ್ತು? ಅದರಿಂದ ಆ ಪತ್ರಿಕೆ ಏನನ್ನು ಹೇಳ ಬಯಸಿತ್ತು? ನಟಿಯೊಬ್ಬಳ ಸಂಭಾವನೆಗೂ ಆಕೆ ಪ್ರತಿಭೆಗೂ ಹೋಲಿಸಿ ನೋಡಿದರೆ ಸೈ. ಆದರೆ ಅಲ್ಲಿ ವಯಸ್ಸ್ಯಾಕೆ ಬಂತು?
ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕರ ಸಮಕ್ಕೆ ಸಂಭಾವನೆ ಕೊಟ್ಟಲ್ಲಿ ಮಾತ್ರ ತಾನು ನಟಿಸುವ ಶರತ್ತು ವಿಧಿಸಿ, ಗೆದ್ದವರು ಬಾಲಿವುಡ್ ನಟಿ ದೀಪಿಕಾ ಪಡಕೋಣೆ. ಇದೀಗ ಅವರ ಸಂಭಾವನೆ ಅಲ್ಲಿನ ನಾಯಕ ನಟರ ಸಂಭಾವನೆಗಿಂತಲೂ ಹೆಚ್ಚು ಎನ್ನುವ ಸುದ್ದಿಯಿದೆ. ಕೇಳಿ ಖುಷಿಯಾಗುತ್ತದೆ, ಇಷ್ಟು ವರ್ಷಗಳ ಶೋಷಣೆಯ ಎದುರು ಈ ರೀತಿ ಖುಷಿಪಡಲು ಮನಸು ಹಿಂಜರಿಯುತ್ತಿಲ್ಲ. ಆ ನಂತರ ಕಂಗನಾ ರನೌತ್ ಸಹ ಇದೇ ರೀತಿಯಲ್ಲಿ ಡಿಮ್ಯಾಂಡ್ ಮಾಡಿದವರು. ಸ್ಕಾರ್ಲೆಟ್ ಜಾಹನ್ಸನ್, ಜನ್ನಿಫರ್ ಲಾರೆನ್ಸ್ ಹಾಗು ಇನ್ನಿಬ್ಬರು ಹಾಲಿವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರು.
ಇವರೆಲ್ಲರನ್ನು ಎಣಿಸಿ ಕೂಡಿಸಿದರೂ ಹೀಗೆ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಂಖ್ಯೆ ನಟರ ೧೦%ರಷ್ಟೂ ಆಗುವುದಿಲ್ಲ! ಆದರೂ ಇಂಥದ್ದೊಂದು ದಿಟ್ಟ ನಿರ್ಧಾರದ ಮೂಲಕ, ಅಸಮಾನತೆಯ ಮುಳ್ಳುಗಳನ್ನು ಕಿತ್ತೆಸೆಯುತ್ತಾ ಮುನ್ನೆಡೆದು ದಾರಿ ಹಸನು ಮಾಡುತ್ತಿರುವ ಈ ಗಟ್ಟಿ ಹೆಣ್ಣುಮಕ್ಕಳನ್ನು ಅಭಿನಂದಿಸಬೇಕು ಎನಿಸುತ್ತದೆ. ‘ಅವೆಂಜರ್ಸ್: ಇನ್ಫಿನಿಟಿ ವಾರ್’ ಸಿನಿಮಾದ ಖ್ಯಾತಿಯ ಹಾಲಿವುಡ್ ನಟ ಬೆನಡಕ್ಟ್ ಕಂಬರ್‍ಬ್ಯಾಚ್, ಕಳೆದ ವರ್ಷ ತನ್ನ ಕೋ-ಸ್ಟಾರ್ ನಟಿಗೆ ತನ್ನ ಸಮಕ್ಕೆ ಸಂಭಾವನೆ ಕೊಟ್ಟಲ್ಲಿ ಮಾತ್ರ ತಾನು ಚಿತ್ರದಲ್ಲಿ ನಟಿಸುವುದು ಎನ್ನುವ ಹೇಳಿಕೆ ನೀಡುವ ಮೂಲಕ ಇತರ ನಟರಿಗೆ ಮಾದರಿಯಾಗಿದ್ದಾರೆ. ಇವೆಲ್ಲ ಲಕ್ಷ ಕೋಟಿಗಳ ಮಾತಾಯ್ತು. ಜ್ಯೂನಿಯರ್ ಆರ್ಟಿಸ್ಟುಗಳ ಸಂಭಾವನೆ ಎಷ್ಟಿರಬಹುದು ಊಹಿಸಬಲ್ಲಿರಾ? ದಿನವೊಂದಕ್ಕೆ ಗಂಡಸರಿಗೆ ೫೦೦ ರೂಪಾಯಿಗಳಾದರೆ ಮಹಿಳೆಗೆ ೩೦೦ ತಪ್ಪಿದರೆ ೪೦೦ ಅಷ್ಟೆ.
ನಿರ್ಮಾಣ - ನಿರ್ದೇಶನ
ಭಾರತದಲ್ಲಿ ಎಲ್ಲ ಭಾಷೆಗಳನ್ನು ಒಟ್ಟುಗೂಡಿಸಿದರೆ ಸಧ್ಯಕ್ಕೆ ಎಪ್ಪತ್ತಕ್ಕೂ ಹೆಚ್ಚು ಜನ ಚಲನಚಿತ್ರ ನಿರ್ದೇಶಕಿಯರಿದ್ದಾರೆ. ಅವರಲ್ಲಿ ಸತತವಾಗಿ ನಿರ್ದೇಶನದಲ್ಲಿ ತೊಡಗಿರುವವರು ಮಾತ್ರ ಮತ್ತೆ ಬೆರಳೆಣಿಕೆಯಷ್ಟೇ ಮಹಿಳೆಯರು. ಹೆಸರಾಂತ ನಿರ್ದೇಶಕರಿಗೆ ಸಿಗುವಷ್ಟು ಸುಲಭದಲ್ಲಿ ನಿರ್ಮಾಪಕರು ಹೆಸರಾಂತ ನಿರ್ದೇಶಕಿಯರಿಗೆ ಸಿಗುವುದಿಲ್ಲ ಅನ್ನುವುದು ವಾಸ್ತವ. ಇನ್ನು ಅನೇಕ ನಿರ್ಮಾಪಕಿಯರ ಹೆಸರಲ್ಲಿ ಸಿನಿಮಾಗಳು ಬಿಡುಗಡೆಯಾದರೂ ಹಣ ಹೂಡುವವರು ಮತ್ತು ಅದರ ನಿರ್ವಹಣೆಯನ್ನು ಮಾಡುವುದು ನಿರ್ಮಾಪಕಿಯರ ಗಂಡಂದಿರೇ. ಎಲೆಕ್ಷನ್ನಲ್ಲಿ ನಾಮ್ ಕೆ ವಾಸ್ತೆ ಹೆಂಡತಿಯನ್ನು ಕಾರ್ಪೋರೇಟರ್ ಸ್ಥಾನದಲ್ಲಿ ನಿಲ್ಲಿಸಿ, ಗೆದ್ದ ಮೇಲೆ ಅವರ ಗಂಡಂದಿರು ಆಡಳಿತ ನಡೆಸುವುದಿಲ್ಲವೇ? ಹಾಗೆಯೇ ಇಲ್ಲೂ ಸಹ. ದಿ. ಪಾರ್ವತಮ್ಮ ರಾಜಕುಮಾರ್ ಥರದವರು, ಕೆಲವು ದಿನಗಳ ಹಿಂದೆ ನಿಧನರಾದ ಜಯಶ್ರೀದೇವಿಯಂಥವರು, ಶೈಲಜಾ ನಾಗ್‍ರಂಥವರು ತಾವೇ ಮುಂದಾಗಿ ನಿಂತು ಸಿನಿಮಾ ನಿರ್ಮಿಸುವವರು ವಿರಳ.
ಚಿತ್ರಕಥೆ - ಸಂಭಾಷಣೆ
ಬರೆಯುವ ಮಹಿಳೆಯರ ಸಂಖ್ಯೆ ಇಲ್ಲೂ ಕಮ್ಮಿಯೇ. ಎಷ್ಟೋ ಜನಕ್ಕೆಸಿನಿಮಾ ಎಂಬ ಉದ್ಯಮದಲ್ಲಿ ಎಷ್ಟೆಲ್ಲ ರೀತಿಯ ಉದ್ಯೋಗ ಅವಕಾಶಗಳಿವೆ ಎನ್ನುವುದೇ ಗೊತ್ತಿರುವುದಿಲ್ಲ. ಇಲ್ಲಿಯ ಕೆಲಸ ಪರ್ಮನಂಟ್ ಅಲ್ಲವಾದ್ದರಿಂದ, ಮನರಂಜನೆಯ ಹೊರತಾಗಿ ಇತ್ತ ಜನರ ಗಮನವೂ ಕಮ್ಮಿ.
ಇನ್ನು ಬಹುತೇಕ ಸಿನಿಮಾದಲ್ಲಿನ ಮಹಿಳಾ ಪಾತ್ರಗಳ ಸಂಭಾಷಣೆ ಹಾಗು ಚಿತ್ರಕತೆಯಲ್ಲಿ ಅವುಗಳ ಮಹತ್ವವೆಷ್ಟು ಅನ್ನೋದನ್ನ ನಾವೆಲ್ಲ ನೋಡಿಯೇ ಇದ್ದೇವೆ. ನಾಯಕಿ ಪಾತ್ರವಾದರೂ ಆಕೆ ಅಬಲೆಯಾಗಿರ್ತಾಳೆ, ಪಾಪದವಳಾಗಿರ್ತಾಳೆ. ಅವಳ ರಕ್ಷಣೆಗೆಂದೇ ನಾಯಕ ಇರೋದು. ಅವಳಿಗೆ ನಾಯಕನ ಹೊರತಾಗಿ ಬೇರೆ ಕನಸುಗಳೇ ಇರಲ್ಲ ಬದುಕಿನಲ್ಲಿ! ನಾಯಕಿಯದೇ ಈ ಹಣೆಬರಹ ಅಂದ ಮೇಲೆ ಇನ್ನು ಪೋಷಕ ಪಾತ್ರಗಳ ಪೋಷಣೆ ಕೇಳಬೇಕೆ?! ಕಮರ್ಷಿಯಲ್ ಸಿನಿಮಾ ಅಂದರೆ ಒಂದು ಐಟಮ್ ಸಾಂಗ್, ಒಂದು ರೇಪ್ ಇರಲೇಬೇಕು. ಹೆಣ್ಣಿನ ದೇಹಸಿರಿಯೇ ಆಕೆಯ ಪ್ರತಿಭೆ ಎಂದು ಭಾವಿಸಿ ಪಾತ್ರ ಸೃಷ್ಠಿಸುವವರ ಸಂಖ್ಯೆ ದೊಡ್ಡದಾಗೇ ಇದೆ. ನಾನು ೨೦೧೫-೨೦೧೭ರ ಅವಧಿಗೆ ಭಾರತೀಯ ಚಲನಚಿತ್ರ ಸೆನ್ಸರ್ ಮಂಡಳಿಯ ಪ್ಯಾನಲ್ ಮೇಂಬರ್ ಆಗಿದ್ದೆ. ಆಗ ನೋಡಿದ ಎಷ್ಟೋ ಚಿತ್ರಗಳು ಬಿಡುಗಡೆಗೂ ಲಾಯಕ್ಕಿಲ್ಲದೆ ಡಬ್ಬಿಯಲ್ಲೇ ಕೊಳೆಯುವಂಥವು. ಸಧ್ಯ ಅವುಗಳಿಗೆ ಬಿಡುಗಡೆ ಭಾಗ್ಯ ಸಿಗದೆ ಇರುವುದು ಪ್ರೇಕ್ಷಕರ ಪುಣ್ಯ! ಅವುಗಳಲ್ಲಂತೂ ಹೆಣ್ಣೆಂದರೆ ಭೋಗದ ವಸ್ತುವಲ್ಲದೇ ಮತ್ತೇನಲ್ಲ. ಇನ್ನು ಹೆಂಗಸರ ಮೇಲಿನ ಬೈಗುಳಗಳೋ ಅವುಗಳನ್ನು ಕೇಳಿದವರ ಕಿವಿ ಬಿಡಿ ಜನ್ಮವೇ ಪಾವನವಾಗುತ್ತದೆ! ಮಹಿಳಾ ಪ್ರಧಾನ ಚಿತ್ರಗಳಲ್ಲಿನ ಸಂಭಾಷಣೆ, ದೃಶ್ಯಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟು, ಹೆಣ್ಣಿನ ಶೋಷಣೆಯ ವಿರುದ್ಧ, ಆಕೆಯ ಪರವಾಗಿ ಯೋಚಿಸಿ ಸಿನಿಮಾ ಮಾಡಿದವರ ಕುರಿತು ಗೌರವ ಮೂಡುತ್ತದೆ. ಹಾಗೆ ಸೂಕ್ಷ್ಮವಾಗಿ ಯೋಚಿಸುವವರ ಹೊರತಾಗಿ, ಮೇಲ್ಮಾತಿಗೆ ನಯವಾಗಿ ಮಾತಾಡುತ್ತಾ, ಸೆಟ್ಟಲ್ಲಿ ಹಗುರವಾಗಿ ಮಾತಾಡುವ, ನಡೆದುಕೊಳ್ಳುವ, ಅವಮಾನಿಸುವ ಜನರೂ ಇದ್ದಾರೆ.
ಇಷ್ಟೆಲ್ಲ ಬರೀ ನಕಾರಾತ್ಮಕಗಳ ಸುರುಳಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ ಅಂದ ಮೇಲೆ ಹೆಣ್ಣುಮಕ್ಕಳು ಯಾಕೆ ಈ ಕ್ಷೇತ್ರಕ್ಕೆ ಬರಬೇಕು? ಯಾಕೆಂದರೆ ಮೊಟ್ಟ ಮೊದಲನೇಯದಾಗಿ ಹೆಣ್ಣಿಗೂ ತನಗೆ ಬೇಕು ಬೇಡವಾದುದನ್ನು ನಿರ್ಧರಿಸುವ ಹಕ್ಕಿದೆಯಾದ್ದರಿಂದ ಅದು ಆಕೆಯ ಇಷ್ಟ. ಚಿತ್ರರಂಗ ಆಕೆಯಲ್ಲಿನ ಪ್ರತಿಭೆಯ ತಾಣವಾದ್ದರಿಂದ ಆಕೆಯ ಹಕ್ಕು ಅದು. ಎರಡನೇಯದಾಗಿ, ಹೆಣ್ಣುಮಕ್ಕಳನ್ನು ಗೌರವದಿಂದ ಕಾಣುವ, ಸಮನಾಗಿ ನಡೆಸಿಕೊಳ್ಳುವ ನಿರ್ದೇಶಕರು, ನಿರ್ಮಾಪಕರು, ನಟರೂ ಇದ್ದಾರೆ. ಇದನ್ನು ನಾನು ನನ್ನ ಸ್ವಂತ ಅನುಭವದಿಂದ ಹೇಳುತ್ತಿರುವೆ. ನಾನು ನಟಿಸಿದ್ದು ಆರೇಳು ಚಿತ್ರಗಳಲ್ಲೇ ಆದರೂ ಕೆಟ್ಟ ಮತ್ತು ಒಳ್ಳೆಯ ಅನುಭವಗಳೆರಡೂ ಆಗಿವೆ. ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಸಭ್ಯರಾಗಿದ್ದಲ್ಲಿ ಇಡೀ ಚಿತ್ರ ತಂಡ ಹೆಣ್ಣುಮಕ್ಕಳೊಡನೆ ಹಾಗು ಇತರರೊಡನೆ ಸಭ್ಯತೆಯಿಂದಲೇ ವರ್ತಿಸುತ್ತದೆ. ಅಲ್ಲೊಂದು ಶಿಸ್ತು ಮತ್ತು ಪ್ರಸನ್ನತೆ ಎದ್ದು ಕಾಣುತ್ತಿರುತ್ತದೆ. ಅಂಥ ವಾತಾವರಣದಲ್ಲಿ ನಟಿಸುವುದು ಅದೆಂಥ ನೆಮ್ಮದಿ ಎಂದರೆ ಈ ತಾರತಮ್ಯಗಳೆಲ್ಲ ಸುಳ್ಳು ಅನಿಸುವಷ್ಟು!
ಏನು ಮಾಡಬೇಕು?
ಚಿತ್ರರಂಗದಲ್ಲಿ ಮಹಿಳೆ ಯಾವುದೇ ವಿಭಾಗದಲ್ಲಿ ಕೆಲಸ ಮಾಡಿದರೂ, ತನ್ನೊಡನೆ ಆಗುವ ಅನ್ಯಾಯವನ್ನು ವಿರೋಧಿಸುವುದನ್ನು ಮೊದಲು ಕಲಿಯಬೇಕಿದೆ. ಆದರೆ ಎಷ್ಟೋ ಜನ ಹೆಣ್ಣುಮಕ್ಕಳು ಅವಕಾಶ ತಪ್ಪಿ ಹೋಗುವ ಭಯದಲ್ಲಿ, ಕೆಲಸ ಕಳೆದುಕೊಂಡರೆ ಮನೆಯ ಒಪ್ಪೊತ್ತಿನ ಗಂಜಿಗೆ ಕಲ್ಲುಬಿದ್ದೀತು ಎನ್ನುವ ಅನಿವಾರ್ಯತೆಯಿಂದ ಸುಮ್ಮನೆ ಕಣ್ಣೀರಿಡುತ್ತಾ ಕಿರುಕುಳಗಳನ್ನು ಸಹಿಸಿಕೊಳ್ಳುತ್ತಾರೆ ಎನ್ನುವುದು ಕಣ್ಣಿಗೆ ರಾಚುತ್ತಿರುವ ವಾಸ್ತವ. ಹೆಣ್ಣೆಂಬ ಕಾರಣಕ್ಕೆ ತಾನು ಪರಿಸ್ಥಿತಿಯ ಗೊಂಬೆಯಾಗುವುದರಿಂದ ತಪ್ಪಿಸಿಕೊಳ್ಳುವುದನ್ನ ನಟಿಯರು ಕಲಿಯಬೇಕಿದೆ. ಆತ್ಮವಿಶ್ವಾಸ ಮತ್ತು ಆತ್ಮಸಮ್ಮಾನ ಎರಡನ್ನೂ ಬೆಳೆಸಿಕೊಳ್ಳಬೇಕಿದೆ. ತನ್ನನ್ನು ಗೌರವಿಸದ ಹೊರತು, ಎದುರಿನವರಿಗೂ ತನ್ನಿಂದ ಗೌರವ ಸಿಗದು ಎನ್ನುವುದನ್ನ ನಯವಾಗಿಯೇ ತನ್ನ ವರ್ತನೆಯ ಮೂಲಕ ತೋರಿಸಿಕೊಡಬೇಕು. ತಾನಿಲ್ಲಿ ಬಂದಿರುವುದು ವಹಿಸಿಕೊಂಡ ಕೆಲಸಕ್ಕಾಗಿಯೇ ಹೊರತು ಯಾರದೋ ಚಪಲ ತೀರಿಸಲಲ್ಲ ಎನ್ನುವುದನ್ನು ಪದೇ ಪದೇ ಮನದಟ್ಟು ಮಾಡಿಕೊಡಬೇಕು. ಇಷ್ಟು ವರ್ಷ ಚಿತ್ರರಂಗದಲ್ಲಿ ನಡೆಯುವ ಅನ್ಯಾಯಗಳ ದೂರು ಸಲ್ಲಿಸಲು ಯಾವುದೇ ಆಂತರಿಕ ದೂರು ಸಮಿತಿ (ICC ಇಂಟರ್ನಲ್ ಕಂಪ್ಲೇಂಟ್ ಕಮೀಟಿ) ನಮ್ಮಲ್ಲಿರಲಿಲ್ಲ. ಆದರೀಗ ನಟ ಚೇತನ್ ಅವರು ತಮ್ಮ F I R E ಸಂಸ್ಥೆಯಲ್ಲಿ ಇಂಥ ಕಮಿಟಿಯೊಂದನ್ನು ರಚಿಸಿ ಕಲಾವಿದರಿಗೆ, ತಂತ್ರಜ್ಞರಿಗೆ ದೂರು ಸಲ್ಲಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಚೇತನ್ ಅವರನ್ನೊಳಗೊಂಡಂತೆ ಈ ಕಮಿಟಿಯಲ್ಲಿ ಡಾ. ವಿಜಯಾ(ಹಿರಿಯ ಸಿನಿಮಾ ಪತ್ರಕರ್ತರು, ಸಾಮಾಜಿಕ ಹೋರಟಗಾರರು), ಕವಿತಾ ಲಂಕೇಶ್(ಚಿತ್ರ ನಿರ್ದೇಶಕರು), ಜಯ್ನಾ ಕೊಠಾರಿ(ವಕೀಲರು), ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಮತ್ತು ನಾನು, ಹೀಗೆ ಒಟ್ಟು ಹನ್ನೊಂದು ಜನ ಸದಸ್ಯರಿದ್ದೇವೆ. ಇಲ್ಲಿ ದೂರು ಕೊಟ್ಟಲ್ಲಿ, ತಮ್ಮ ಹೆಸರು ಬಯಲಿಗೆ ಬೀಳುತ್ತೆ, ಬಣ್ಣ ಬಯಲಾಗಿ ಮರ್ಯಾದೆ ಹೋಗುತ್ತೆ ಎನ್ನುವ ಭಯಕ್ಕೇನೇ ಎಷ್ಟೋ ಜನ ಅಸಭ್ಯವಾಗಿ ವರ್ತಿಸುವುದನ್ನ ನಿಲ್ಲಿಸುತ್ತಾರೆ. ಇನ್ನುಳಿದವರಿಗೆ ಅದು ಪಾಠವಾಗುತ್ತದೆ. ನೊಂದವರು ದೂರು ಕೊಡುವ ಧೈರ್ಯ ಮಾಡುವ ಮೂಲಕ ನ್ಯಾಯಕ್ಕಾಗಿ ICCಯ ಸದುಪಯೋಗ ಮಾಡಿಕೊಳ್ಳಬೇಕು.
- ಜಯಲಕ್ಷ್ಮಿ ಪಾಟೀಲ್
(ಮಹಿಳಾ ದಿನಾಚರಣೆಯ ಪ್ರಯುಕ್ತ, ಈ ಲೇಖನ ಸುಚಿತ್ರಾ ಫಿಲ್ಮ್ ಸೊಸೈಟಿಯ ಮಾಸಿಕ, ‘ಅಪ್ರಿಸಿಯೇಶನ್’ನಲ್ಲಿ ಪ್ರಕಟಗೊಂಡಿದೆ. ಪೂರ್ಣ ಲೇಖನ ಸುಚಿತ್ರದ ವೆಬ್‍ಸೈಟ್ www.suchitra.org ನಲ್ಲಿ)